'ತೇಜಸ್' ಏರಿದ ಬ್ಯಾಡ್ಮಿಂಟನ್ ತಾರೆ ಸಿಂಧು

Update: 2019-02-23 14:15 GMT

ಬೆಂಗಳೂರು, ಫೆ.23 : ಅಂತರ್‌ರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಶನಿವಾರ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ತೇಜಸ್‌ನಲ್ಲಿ ಹಾರಾಟ ನಡೆಸಿದರು. ಈ ಮೂಲಕ ತೇಜಸ್ ವಿಮಾನಕ್ಕೆ ಮಹಿಳಾ ಕೋ ಪೈಲಟ್ ಎಂಬ ಹೆಗ್ಗಳಿಕೆ ಪಡೆದರು.

ಸುಮಾರು 25 ನಿಮಿಷ ಆಗಸದಲ್ಲಿ ವಿಮಾನದಲ್ಲಿ ಸುತ್ತಾಡಿದ ಸಿಂಧು ರೋಮಾಂಚನಗೊಂಡರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತೇಜಸ್ ದೇಶದ ನಿಜವಾದ ಹೀರೋ ಆಗಿದ್ದು, ಹಾರಾಟ ನಡೆಸಲು ನನಗೆ ಅವಕಾಶ ಲಭಿಸಿದ್ದು ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಕ್ರೀಡಾಪಟುಗಳಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದ ಗೌರವಕ್ಕೆ ಸಿಂಧು ಪಾತ್ರರಾಗಿದ್ದು, ಇದಕ್ಕೆ ಅವಕಾಶ ನೀಡಿದ ಡಿಆರ್‌ಡಿಒಗೆ ಋಣಿಯಾಗಿದ್ದೇನೆ ಎಂದು ಸಿಂಧು ಹೇಳಿದರು.

ವಿಂಗ್ ಕಮಾಂಡರ್ ಸಿದ್ದಾರ್ಥ್ ಅವರೊಂದಿಗೆ ಸಿಂಧು ವಿಮಾನ ಹಾರಾಟ ನಡೆಸಿದರು. ರಾಜ್ಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತೇಜಸ್ ವಿಮಾನವನ್ನು ನಿರ್ಮಿಸಿದೆ. ತೇಜಸ್ ಮಲ್ಟಿರೋಲ್ ಲೈಟ್ ಫೈಟರ್ ಜೆಟ್ ಆಗಿದ್ದು, ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ವೈಮಾನಿಕ ಪ್ರದರ್ಶನದ ಭಾಗವಾಗಿ ಭಾರತ ಭೂಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News