ಏರ್ ಶೋ ವೇಳೆ ಅಗ್ನಿ ಅನಾಹುತಕ್ಕೆ ರಾಜ್ಯ ಸರಕಾರವೇ ಹೊಣೆ: ಯಡಿಯೂರಪ್ಪ

Update: 2019-02-24 14:22 GMT

ಬೆಂಗಳೂರು, ಫೆ.24: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಅಗ್ನಿ ಅನಾಹುತ ಸಂಭವಿಸಿ, ನೂರಾರು ಕಾರುಗಳು ಸುಟ್ಟು ಕರಕಲಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ಜನರು ಕೇವಲ ಕಾರು ಮಾತ್ರವಲ್ಲ, ಅದರಲ್ಲಿ ಇಟ್ಟಿದ್ದ ದಾಖಲೆಗಳು ಮತ್ತು ಬೆಳೆಬಾಳುವ ವಸ್ತುಗಳನ್ನು ತಮ್ಮದಲ್ಲದ ತಪ್ಪಿಗೆ ಕಳೆದುಕೊಂಡಿದ್ದಾರೆ ಎಂದರು.

ಇದಕ್ಕೆ ರಾಜ್ಯ ಸರಕಾರ ಹಾಗೂ ರಾಜ್ಯದ ಗೃಹ ಸಚಿವರೇ ಹೊಣೆ. ಎಂತಹ ಸಣ್ಣ ಕಾರ್ಯಕ್ರಮದರೂ ಅಗ್ನಿ ಅವಘಡ ತಡೆಗೆ ಸುರಕ್ಷಿತ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಏರೋ ಇಂಡಿಯಾ ಪ್ರದರ್ಶನದ ಸ್ಥಳದಲ್ಲಿ ಅಂತಹ ವ್ಯವಸ್ಥೆ ಇಲ್ಲದೇ ಇದ್ದದ್ದು, ಪೊಲೀಸ್ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಅವರು ದೂರಿದರು.

ವಾಹನ ನಿಲುಗಡೆಗೆ ಸ್ಥಳವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಸಂಚಾರಿ ಪೊಲೀಸರು ಕೈಗೊಳ್ಳದೇ ಇದ್ದದ್ದು ಹಾಗೂ ಈ ಸ್ಥಳವನ್ನು ಅಗ್ನಿ ಶಾಮಕ ದಳದ ಅಧಿಕಾರಿಗಳು ಪರಿಶೀಲಿಸಿ ಅದಕ್ಕೆ ಎನ್‌ಓಸಿ ನೀಡಬೇಕಾಗಿತ್ತು. ಆದರೆ, ಈ ಜವಾಬ್ದಾರಿ ನಿರ್ವಹಣೆಯಲ್ಲೂ ರಾಜ್ಯ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

ಅಂತರ್‌ರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಸಣ್ಣ ತಪ್ಪುಗಳು ದೇಶದ ಖ್ಯಾತಿಗೆ ಧಕ್ಕೆ ಬರುತ್ತದೆ ಎಂಬ ಪರಿಜ್ಞಾನ ಪೊಲೀಸರಲ್ಲಾಗಲಿ, ಅಗ್ನಿಶಾಮಕ ಅಧಿಕಾರಿಗಳಲ್ಲಾಗಲಿ ಕಂಡು ಬಂದಿಲ್ಲ. ಗೃಹ ಸಚಿವರು ಕೇವಲ ಕಾರುಗಳು ಸುಟ್ಟಿವೆ, ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಮಾಧಾನದ ಮಾತನಾಡಿರುವುದು ಆಘಾತಕಾರಿ. ನೂರಾರು ಕಾರುಗಳು ಭಸ್ಮವಾಗಿದ್ದು ರಾಷ್ಟ್ರೀಯ ನಷ್ಟ ಎಂದು ಸಚಿವರಿಗೆ ಅನ್ನಿಸಿಯೇ ಇಲ್ಲ ಎಂದು ಅವರು ಹೇಳಿದರು.

ರಾಜಧಾನಿಯಲ್ಲಿ ನಡೆಯುವ ಇಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಕ್ತ ಆದೇಶ ನೀಡಬೇಕಾದ್ದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜವಾಬ್ದಾರಿಯಾಗಿತ್ತು. ಆದರೆ, ಇವರಿಬ್ಬರೂ ಈ ಕಾರ್ಯಕ್ರಮಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದದ್ದು ಖಂಡನೀಯ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಕಾರುಗಳನ್ನು ಕಳೆದುಕೊಂಡವರಿಗೆ ವಿಮಾ ಪರಿಹಾರದ ಜೊತೆಗೆ ಇತರ ಪರಿಹಾರವನ್ನು ನೀಡಬೇಕು. ಈ ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಬೇಕು. ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ಸಹ ವಕ್ತಾರ ಎಸ್.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News