ವೈಮಾನಿಕ ಪ್ರದರ್ಶನ ಮನರಂಜನೆಯಲ್ಲ, ದೇಶದ ಶಕ್ತಿ ಪ್ರದರ್ಶನ: ರಾಜ್ಯಪಾಲ ವಜುಭಾಯಿ ವಾಲಾ

Update: 2019-02-24 14:47 GMT

ಬೆಂಗಳೂರು, ಫೆ.24: ಕಳೆದ ನಾಲ್ಕು ದಿನಗಳಿಂದ ನಗರದ ಯಲಹಂಕ ವಾಯುನೆಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ದೇಶದ ಶಕ್ತಿ ಸಾಮರ್ಥ್ಯದ ಧ್ಯೋತಕವಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ವೈಮಾನಿಕ ಪ್ರದರ್ಶನದ ಅಂತಿಮ ದಿನದಂದು ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಮಾನ, ಹೆಲಿಕಾಪ್ಟರ್‌ಗಳ ಪ್ರದರ್ಶನ ಕೇವಲ ಮನರಂಜನೆಯಲ್ಲ. ದೇಶದ ಶಕ್ತಿ ವಿಶ್ವಕ್ಕೆ ಪರಿಚಯ ಮಾಡುವ ಪ್ರದರ್ಶನವಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಬುದ್ದಿವಂತಿಕೆ ಇದೆ ಹಾಗೂ ತಂತ್ರಜ್ಞರು, ಒಳ್ಳೆಯ ವಿಜ್ಞಾನಿಗಳಿದ್ದಾರೆ. ಆದರೆ ಅವಕಾಶಗಳ ಕೊರತೆ ಇದೆ. ಸರಿಯಾದ ಅವಕಾಶ ಸಿಕ್ಕಿದ್ದರೆ ನಾವು ಯಾರಿಗೂ ಕಡಿಮೆ ಇಲ್ಲ ಎಂದು ವಾಲಾ ಅಭಿಪ್ರಾಯಪಟ್ಟರು.

ವಿಶ್ವದಲ್ಲಿ ಭಾರತವು ಯುವ ಭಾರತ ಎಂದು ಗುರುತಿಸಿಕೊಂಡಿದೆ. ಸುಖೋಯ್ ವಿಮಾನಕ್ಕೆ ಸಾಟಿಯಾಗುವ ತೇಜಸ್ ವಿಮಾನ ನಿರ್ಮಾಣ ಮಾಡಿರುವ ನಮ್ಮ ದೇಶ ಯಾವುದರಲ್ಲಿಯೂ ಕಡಿಮೆಯಿಲ್ಲ. ನಮ್ಮಲ್ಲಿ ಹಣಕಾಸಿನ ಕೊರತೆ ಇರಬಹುದು. ಆದರೆ, ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿದ್ದೇವೆ. ದೇಶದ ರಕ್ಷಣೆಗೆ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕು. ಅಗತ್ಯವಿದ್ದರೆ ಬಲಿದಾನಕ್ಕೂ ಸಿದ್ಧರಾಗಬೇಕು ಎಂದು ಅವರು ನುಡಿದರು.

ಜಗತ್ತಿನ ಅತ್ಯಂತ ಚಿಕ್ಕ ದೇಶವಾದ ಇಸ್ರೇಲ್ ತಂತ್ರಜ್ಞಾನ ಬಳಕೆಯಿಂದ ಉನ್ನತಿ ಸಾಧಿಸಿದೆ. ಭಾರತವೂ ಆ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಮುಂದಿನ ದಿನಗಳಲ್ಲಿ ಭಾರತದ ತಂತ್ರಜ್ಞರು ಎಂ-22 ವಿಮಾನವನ್ನು ನಿರ್ಮಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮಾತನಾಡಿ, ಬೆಂಗಳೂರು ದೇಶದ ಶಾಶ್ವತ ಏರೋ ಇಂಡಿಯಾ ಪ್ರದರ್ಶನದ ಸ್ಥಳ ಎಂದು ಘೋಷಣೆಯಾಗಬೇಕು. ಕಳೆದ 12 ಏರೋ ಇಂಡಿಯಾ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರು ಏರೋ ಇಂಡಿಯಾ ಪ್ರದರ್ಶನದ ಫೋಟೋಗ್ರಫಿ, ಇನ್ಸ್‌ಸ್ಟಾಗ್ರಾಂ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತ್ ದಹಾಯ್, ವಾಯುಪಡೆಯ ತರಬೇತಿ ಮುಖ್ಯಸ್ಥ ಏರ್‌ಮಾರ್ಷಲ್ ಆರ್.ಕೆ.ಬಡೇರಿಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News