ಸ್ವದೇಶಿ ನಿರ್ಮಿತ ಲಘು ಹೆಲಿಕ್ಯಾಪ್ಟರ್ ಸೇನೆಗೆ ಹಸ್ತಾಂತರ

Update: 2019-02-24 15:38 GMT

ಬೆಂಗಳೂರು, ಫೆ.24: ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆ(ಎಚ್‌ಎಎಲ್) ನಿರ್ಮಿಸಿರುವ ಸುಧಾರಿತ ಲಘು ಹೆಲಿಕ್ಯಾಪ್ಟರ್ (ಎಎಚ್‌ಎಲ್) ಎಂಕೆ-3(ಧ್ರುವ್)ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಯಿತು.

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್, ಹೆಲಿಕ್ಯಾಪ್ಟರ್‌ಗಳ ಮಾದರಿಯನ್ನು ಸೇನೆಯ ವಿಮಾನಯಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕನ್ವಲ್ ಕುಮಾರ್‌ರಿಗೆ ಹಸ್ತಾಂತರಿಸಿದರು. ಎಚ್‌ಎಎಲ್ ಹೆಲಿಕ್ಯಾಪ್ಟರ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ಎಸ್.ಭಾಸ್ಕರ್ ಉಪಸ್ಥಿತರಿದ್ದರು.

ಎಚ್‌ಎಎಲ್ 2017ರಲ್ಲಿ 22 ಎಎಲ್ಎಚ್ ಎಂಕೆ-3 ಹಾಗೂ 18 ಎಎಲ್‌ಎಚ್-4 ಧ್ರುವ್ ಹೆಲಿಕ್ಯಾಪ್ಟರ್ ಸೇರಿದಂತೆ 40 ಧ್ರುವ್ ಹೆಲಿಕ್ಯಾಪ್ಟರ್ ಪೂರೈಸಲು ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತವಾಗಿ 3 ಧ್ರುವ್ ಹೆಲಿಕ್ಯಾಪ್ಟರ್‌ಗಳನ್ನು ಸೇನೆಗೆ ನೀಡಲಾಯಿತು. ಎಂಕೆ-4 ರುದ್ರ ಹೆಲಿಕ್ಯಾಪ್ಟರ್‌ಗಳು ಅಭಿವೃದ್ಧಿ ಹಂತದಲ್ಲಿದ್ದು, ಅಭಿವೃದ್ಧಿ ಪೂರ್ಣಗೊಂಡಿರುವ ಎಎಲ್ಎಚ್ ಎಂಕೆ-3 ಧ್ರುವ್ ಪೈಕಿ 3 ಹೆಲಿಕ್ಯಾಪ್ಟರ್‌ಗಳನ್ನು ಹಸ್ತಾಂತರ ಮಾಡಲಾಗಿದ್ದು, ಉಳಿದ 19 ಹೆಲಿಕ್ಯಾಪ್ಟರ್‌ಗಳನ್ನು ಜೂನ್-ಜುಲೈ ವೇಳೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉತ್ಪಾದನೆಗೆ ಒಪ್ಪಂದ: ಲಘು ಉಪಯುಕ್ತ ಹೆಲಿಕ್ಯಾಪ್ಟರ್ ಉತ್ಪಾದನೆಗೆ ವೇಗ ನೀಡಲು ಹಿಂದುಸ್ತಾನ್ ಏರೋನಾಟಿಕ್ಸದ್ ಸಂಸ್ಥೆ (ಎಚ್‌ಎಎಲ್) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿನ ಹೆಲಿಕ್ಯಾಪ್ಟರ್ ತಯಾರಿಕಾ ಕಾರ್ಖಾನೆಯ 2ನೇ ಹಂತದ ನಿರ್ಮಾಣಕ್ಕೆ ಕೇಂದ್ರ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ (ಸಿಪಿಡಬ್ಲೂಡಿ) ಜತೆಗೆ ಒಪ್ಪಂದ ಮಾಡಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News