ಆಯುಷ್ಮಾನ್ ಭಾರತಕ್ಕೆ ಹಣ ರಾಜ್ಯ ಸರಕಾರದ್ದು, ಹೆಸರು ಮೋದಿಯದ್ದು: ಸಿಎಂ ಕುಮಾರಸ್ವಾಮಿ

Update: 2019-02-25 14:09 GMT

ಬೆಂಗಳೂರು, ಫೆ. 25: ಆಯುಷ್ಮಾನ್ ಭಾರತ ಯೋಜನೆ ಮೋದಿಯವರದ್ದು ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಅದಕ್ಕೆ ಹಣ ರಾಜ್ಯ ಸರಕಾರದ್ದು, ಹೆಸರು ಮಾತ್ರ ಮೋದಿಯವರದ್ದು. ಹೀಗಾಗಿ ಮೋದಿ ಪೊಳ್ಳು ಭಾಷಣಕ್ಕೆ ಕನ್ನಡಿಗರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಸೋಮವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ರಾಜ್ಯದ ಕರ್ನಾಟಕ ಆರೋಗ್ಯ ಮುಂತಾದ ಯೋಜನೆಗಳನ್ನು ವಿಲೀನ ಮಾಡಲಾಗಿದೆ. ಈ ಮೂಲಕ ರಾಜ್ಯ ಸರಕಾರದ ಪಾಲು ಅಧಿಕ ಎಂದರು.

ಪ್ರಧಾನಿ ಮೋದಿಯವರಂತೆ ನಾನು ಸುಳ್ಳು ಪ್ರಚಾರ ಮಾಡಿ, ಯೋಜನೆಗಳನ್ನು ಘೋಷಿಸಿಲ್ಲ. ನುಡಿದಂತೆ ನಡೆದು, ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದ ಅವರು, ಐದು ವರ್ಷಗಳ ಕಾಲ ರೈತರ ಬಗ್ಗೆ ಯೋಚಿಸದ ಮೋದಿ, ಇದೀಗ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ರೈತರ ಬಗ್ಗೆ ಕಾಳಜಿಗೆ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು. ಕಿಸಾನ್ ಸಮ್ಮಾನ್ ಯೋಜನೆಯ ಹೆಸರಿನಲ್ಲಿ 6 ಸಾವಿರ ರೂ.ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಅಲ್ಲದೆ, ಜನರ ಹಣವನ್ನು ಜನರಿಗೆ ಲಂಚವಾಗಿ ನೀಡುವ ಮೂಲಕ ಮತಯಾಚನೆಗೆ ಪ್ರಧಾನಿ ಮೋದಿ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ರೈತರ ಬೆಳೆ ಸಾಲಮನ್ನಾ ಪಾಪದ ಕೆಲಸ’ ಎಂದು ಹೇಳಿಕೆ ನೀಡಿದ್ದ ಮೋದಿ ಇದೀಗ ರೈತರ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದ ಕುಮಾರಸ್ವಾಮಿ ರಾಜ್ಯ ಸರಕಾರ ಹಾಲು ಉತ್ಪಾದಕರಿಗೆ ಸಬ್ಸಿಡಿಗೆ ನೀಡಲು 2,500 ಕೋಟಿ ರೂ. ನೀಡುತ್ತಿದೆ. ಸರಕಾರದಿಂದ ಅಭಿವೃದ್ಧಿಗಾಗಿ, ಯೋಜನೆಗಳಿಗೆ ಸಾಕಷ್ಟು ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News