ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಎಐಟಿಯುಸಿ ಧರಣಿ

Update: 2019-02-25 14:35 GMT

ಬೆಂಗಳೂರು, ಫೆ.25: ಎಲ್ಲ ಕಾರ್ಮಿಕರಿಗೂ ಏಳನೇ ವೇತನ ಆಯೋಗದ ಪ್ರಕಾರ 18 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಕಾರ್ಯಕರ್ತರಿಂದು ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ್ದ ಎಐಟಿಯುಸಿ ಸಂಘಟನೆಯ ನೂರಾರು ಕಾರ್ಯಕರ್ತರು ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಬಂಡವಾಳಶಾಹಿಗಳ ಪರವಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದು, ಕಾರ್ಪೋರೇಟ್ ಕಂಪನಿಗಳಿಂದ ಚುನಾವಣೆಗಾಗಿ ಹಣವನ್ನು ಪಡೆಯಲು ಹವಣಿಸುತ್ತಿವೆ. ಅದಕ್ಕೆ ಕಾರ್ಮಿಕರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2013ರ ಲೋಕಸಭಾ ಚುನಾವಣೆ ವೇಳೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಜನ ವಿರೋಧಿ ನೀತಿ ಪ್ರದರ್ಶನ ಮಾಡಿತು. ಅಲ್ಲದೇ ಕಾರ್ಮಿಕರನ್ನು ಕಾಲ ಕಸದಂತೆ ನಡೆಸಿಕೊಂಡಿತು. ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಂಡಿದ್ದಾರೆ. ಇದೇ ರೀತಿ ಮುಂದುವರಿದರೆ ದೇಶಕ್ಕೆ ಹಾಗೂ ನಾಡಿನ ಅಭಿವೃದ್ಧಿಗೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಬಂಡವಾಳಶಾಹಿಗಳನ್ನು ಓಲೈಸಲಾಗುತ್ತಿದೆ. ಕಾರ್ಪೊರೇಟ್ ವಲಯದ ಪರವಾದ ಕಾನೂನುಗಳನ್ನು ಜಾರಿ ಮಾಡಲಾಗುತ್ತಿದೆ. ಹಲವು ಕಾನೂನುಗಳನ್ನು ಸಮೀಕರಿಸಿ ಎರಡು ಕಾನೂನುಗಳನ್ನಾಗಿ ಮಾಡಿರುವುದು ದೇಶದ ದುರಂತ. ಕೇಂದ್ರ ಸರಕಾರ ಬಂಡವಾಳಶಾಹಿಗಳ ಪರವಾಗಿ ಮಾಡಿರುವ ಕಾನೂನುಗಳನ್ನು ಕೂಡಲೇ ರದ್ಧು ಮಾಡಬೇಕು ಎಂದು ಆಗ್ರಹಿಸಿದರು.

ನಿಗದಿತ ಕಾಲಾವಧಿ ಕೆಲಸದ ಪದ್ಧತಿ ರದ್ದಾಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುವುದು ಸರ್ವೋಚ್ಚ ನ್ಯಾಯಾಲಯದ ತೀರ್ಮಾನವಾಗಿದ್ದು, ಅದರಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಾನ ವೇತನ ನೀಡಬೇಕು. ರಾಜ್ಯ ಸರಕಾರ ಸ್ಥಾಯಿ ಆದೇಶ ಕಾನೂನಿನ್ವಯ ಐಟಿ ವಲಯಕ್ಕೆ ಯಾವುದೇ ವಿನಾಯಿತಿ ನೀಡಬಾರದು. 10 ಲಕ್ಷ ಐಟಿ ಕಾರ್ಮಿಕರಿಗೆ ಕೆಲಸದ ಭದ್ರತೆ ನೀಡುವ ಕ್ರಮಗಳನ್ನು ಜಾರಿ ಮಾಡಬೇಕು ಎಂದು ಆಗ್ರಸಿದರು.

ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಸಕಾಲ ಯೋಜನೆ ಅಡಿಯಲ್ಲಿ ಸೇರಿಸಬೇಕು. ಸರೋಜಿನಿ ಮಹಿಷಿ ವರದಿ ಜಾರಿಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚು ಆದ್ಯತೆ ಸಿಗುವಂತೆ ಮಾಡಬೇಕು. ಗಾರ್ಮೆಂಟ್ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News