ಕೋಮುವಾದಿಗಳ ಅಪಪ್ರಚಾರದಿಂದ ಅಧಿಕಾರ ಕೈ ತಪ್ಪಿತು: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-02-26 12:33 GMT

ಬೆಂಗಳೂರು, ಫೆ.26: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನನಗೆ ಹಾಗೂ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಆದರೆ, ಕೆಲವು ಕೋಮುವಾದಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರದಿಂದ ನಮಗೆ ಮತ್ತೆ ಅಧಿಕಾರ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಯೋಜಿಸಿದ್ದ ಉಮ್ರಾ ಯಾತ್ರೆಗೆ ಹೊರಡುತ್ತಿರುವ ಹಜ್‌ ಕ್ಯಾಂಪ್‌ನ 300 ಸ್ವಯಂ ಸೇವಕರ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಉಮ್ರಾ ಯಾತ್ರೆಗೆ ಹೋಗುತ್ತಿರುವವರು ನಮ್ಮ ದೇಶ, ರಾಜ್ಯ ಹಾಗೂ ಇಡೀ ಮಾನವ ಕುಲಕ್ಕೆ ಒಳಿತನ್ನು ಬಯಸಿ, ಅಲ್ಲಾಹ್‌ನಲ್ಲಿ ಪ್ರಾರ್ಥನೆ ಮಾಡಿ. ಮನುಷ್ಯ ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಮುಹಮ್ಮದ್ ಸಲೀಮ್ ಹಾಗೂ ರಿಝ್ವನ್ ಅಹ್ಮದ್ ಸೈಕಲ್‌ನಲ್ಲಿ 9 ಸಾವಿರ ಕಿ.ಮೀ ಸಂಚರಿಸಿ, ಹಜ್ ಯಾತ್ರೆ ಕೈಗೊಳ್ಳಲು ತೆರಳುತ್ತಿರುವುದು ಇಂದು ಸಾಹಸವೇ ಸರಿ. ಉಮ್ರಾ ಹಾಗೂ ಹಜ್ ಯಾತ್ರೆಗೆ ತೆರಳುತ್ತಿರುವವರು, ಸುರಕ್ಷಿತವಾಗಿ ಹಾಗೂ ಆರೋಗ್ಯವಾಗಿ ತಮ್ಮ ಪ್ರಯಾಣ ಮುಗಿಸಿಕೊಂಡು ಸ್ವದೇಶಕ್ಕೆ ಹಿಂದಿರುಗಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.

ಸಾರ್ವಜನಿಕ ಜೀವನದಲ್ಲಿ ಜನಪ್ರಿಯತೆ ಗಳಿಸುವುದು ತುಂಬಾ ಕಷ್ಟ. ಬಡವರು, ಸಾಮಾನ್ಯ ಜನರ ಬಗ್ಗೆ ಕಾಳಜಿ ಇಟ್ಟುಕೊಳ್ಳುವುದರ ಜೊತೆಗೆ, ಮನುಷ್ಯರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ. ಝಮೀರ್‌ ಅಹ್ಮದ್‌ ಖಾನ್‌ಗೆ ಅಂತಹ ಮನಸ್ಸು ಇರುವುದನ್ನು ನಾನು ಕಂಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಮ್ಮಿಶ್ರ ಸರಕಾರ ರಚನೆ ವೇಳೆ ಝಮೀರ್ ಅಹ್ಮದ್ ತನ್ನನ್ನು ಮಂತ್ರಿ ಮಾಡಿ ಎಂದು ನನ್ನ ಬಳಿ ಕೇಳಿರಲಿಲ್ಲ. ಈತನನ್ನು ಮಂತ್ರಿ ಮಾಡಿದರೆ ಮುಸ್ಲಿಮ್ ಸಮುದಾಯ ಹಾಗೂ ಬಡವರಿಗೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿಂದ ನಾನು ಮಂತ್ರಿ ಮಾಡಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾತನಾಡಿ, ಕಳೆದ 22 ವರ್ಷಗಳಿಂದ ಹಜ್ ಕ್ಯಾಂಪ್‌ನಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದ 1500 ಮಂದಿ ಪೈಕಿ 900ಕ್ಕೂ ಹೆಚ್ಚು ಮಂದಿ ಒಮ್ಮೆಯೂ ಉಮ್ರಾ ಅಥವಾ ಹಜ್ ಯಾತ್ರೆಗೆ ಹೋಗಿರಲಿಲ್ಲ. ಅಂತಹವರನ್ನು ಗುರುತಿಸಿ ಉಮ್ರಾ ಯಾತ್ರೆಗೆ ಕಳುಹಿಸುತ್ತಿದ್ದೇನೆ ಎಂದರು.

2018ರಲ್ಲಿ 250 ಜನರನ್ನು ಕಳುಹಿಸಲಾಗಿತ್ತು. ಈ ವರ್ಷ 300 ಮಂದಿಯನ್ನು ಕಳುಹಿಸಲಾಗುತ್ತಿದೆ. ಮುಂದಿನ ವರ್ಷ ಇನ್ನುಳಿದಂತಹ 380 ಜನರನ್ನು ಕಳುಹಿಸಲು ಪ್ರಯತ್ನಿಸುತ್ತೇನೆ. 300 ಮಂದಿ ಪೈಕಿ 120 ಮಂದಿ ಫೆ.14ರಂದು ಯಾತ್ರೆಗೆ ತೆರಳಿದ್ದಾರೆ. ಅಂದೇ ಪುಲ್ವಾಮಾದಲ್ಲಿ ನಮ್ಮ ಯೋಧರ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಿರಲಿಲ್ಲ ಎಂದು ಅವರು ತಿಳಿಸಿದರು.

ಮುಹಮ್ಮದ್ ಸಲೀಮ್ ಹಾಗೂ ರಿಝ್ವನ್ ಅಹ್ಮದ್ ಎಂಬವರು ಸೈಕಲ್ ನಲ್ಲಿ  9 ಸಾವಿರ ಕಿ.ಮೀ. ಕ್ರಮಿಸಿ ಹಜ್ ಯಾತ್ರೆಗೆ ಹೋಗುತ್ತಿದ್ದಾರೆ. ಐದೂವರೆಯಿಂದ ಆರು ತಿಂಗಳ ಪ್ರಯಾಣ ಇವರದ್ದು. ಇವರ ಯಾತ್ರೆಗೆ 3.80 ಲಕ್ಷ ರೂ.ಖರ್ಚಾಗುತ್ತಿದೆ ಎಂದ ಅವರು, ಇದೇ ವೇಳೆ ವೈಯಕ್ತಿಕವಾಗಿ ಅವರಿಗೆ 5 ಲಕ್ಷ ರೂ.ಗಳನ್ನು ನೀಡಿದರು.

ಸೈಕಲ್ ನಲ್ಲಿ ಹಜ್ ಯಾತ್ರೆಗೆ ಹೋಗುತ್ತಿರುವವರು ಪಾಕಿಸ್ತಾನದ ಮಾರ್ಗವಾಗಿ ಹೋಗಬೇಕಿತ್ತು. ಆದರೆ, ಪುಲ್ವಾಮ ಘಟನೆಯಿಂದಾಗಿ ಪಾಕಿಸ್ತಾನದ ಮಾರ್ಗವನ್ನು ಬಹಿಷ್ಕರಿಸಿ, ಇಲ್ಲಿಂದ ಮುಂಬಯಿವರೆಗೆ ಸೈಕಲ್ ನಲ್ಲಿ, ನಂತರ ಅಲ್ಲಿಂದ ಇರಾನ್‌ವರೆಗೆ ವಿಮಾನದಲ್ಲಿ ಪ್ರಯಾಣಿಸಿ, ಅಲ್ಲಿಂದ ಮತ್ತೆ ಸೈಕಲ್ ನಲ್ಲಿ ಹೋಗುತ್ತಾರೆ ಎಂದು ಅವರು ವಿವರಿಸಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿದ್ದರಾಮಯ್ಯ ನನ್ನ ಮೇಲೆ ವಿಶ್ವಾಸವಿಟ್ಟು, ಮಂತ್ರಿ ಮಾಡಿದ್ದಾರೆ. ಎಲ್ಲಿಯವರೆಗೆ ಸಾರ್ವಜನಿಕ ಜೀವನದಲ್ಲಿ ಇರುತ್ತೇನೋ ಅಲ್ಲಿಯವರೆಗೆ ನನ್ನ ಸಮುದಾಯ ಹಾಗೂ ಸಿದ್ದರಾಮಯ್ಯ ನನ್ನಿಂದಾಗಿ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕಾರ್ಯಕ್ರಮದಲ್ಲಿ ಮೌಲಾನ ಲುತ್ಫುಲ್ಲಾ ಮಝ್ಹರ್ ರಶಾದಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್, ಮೌಲಾನ ಮುಹಮ್ಮದ್ ಮುಝಮ್ಮಿಲ್ ವಾಲಾಜಾಹಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News