ವಕೀಲೆ ಧರಣಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಏಕೆ ವಹಿಸಬಾರದು?: ರಾಜ್ಯ ಸರಕಾರವನ್ನು ಪ್ರಶ್ನಿಸಿದ ಹೈಕೋರ್ಟ್

Update: 2019-02-26 15:15 GMT

ಬೆಂಗಳೂರು, ಫೆ.26: ಯುವ ವಕೀಲೆ ಎಸ್.ಧರಣಿ ಸಾವಿನ ಪ್ರಕರಣವನ್ನು ಏಕೆ ಸಿಬಿಐ ತನಿಖೆಗೆ ವಹಿಸಬಾರದು ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.

ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್ ಅವರು ವಾದಿಸಿ, ಪ್ರಕರಣವನ್ನು ಸಿಸಿಬಿಯಿಂದ ಸಿಐಡಿಗೆ ವರ್ಗಾಯಿಸಲಾಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವರ್ಗಾಯಿಸಲಾಗಿದೆ, ಸಿಸಿಬಿ ದಕ್ಷತೆಯಿಂದ ತನಿಖೆ ನಡೆಸಿರಲಿಲ್ಲವೇ, ಸಿಸಿಬಿ ತನಿಖಾಧಿಕಾರಿಗಳು ಯಾರಿದ್ದರು ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು. ಮುಂದಿನ ಹತ್ತು ದಿನಗಳ ಒಳಗೆ ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿತು.

ಪ್ರಕರಣವೇನು: ವಕೀಲೆ ಧರಣಿ ಅವರು 2018ರ ಡಿ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹದೇವಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧರಣಿ ವಾಸವಿದ್ದ ಮನೆ ಕಬಳಿಸಲು ಸ್ಥಳೀಯ ಪಾಲಿಕೆ ಸದಸ್ಯ ವಿ.ಸುರೇಶ್ ಹಾಗೂ ಆತನ ಸಹಚರರು ಕೊಲೆ ಬೆದರಿಕೆ ಹಾಕಿದ್ದರು. ಅವರ ಮನಗೆ ನುಗ್ಗಿ ಹಲ್ಲೆಯನ್ನೂ ನಡೆಸಲಾಗಿತ್ತು. ಇದರಿಂದಾಗಿ ಧರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸಂಘದ ಆರೋಪ.

ಕೋರಿಕೆ ಏನು: ಧರಣಿ ಪರಿಶಿಷ್ಟ ಜಾತಿಗೆ ಸೇರಿದ ವಕೀಲೆ. ಅವರ ಸಾವಿಗೆ ಸುರೇಶ್ ಮೂಲ ಕಾರಣ. ಸುರೇಶ್ ರಾಜಕೀಯ ಪ್ರಭಾವ ಹೊಂದಿದ್ದು ಪೊಲೀಸರು ಅವರ ವಿರುದ್ಧ ವಿಚಾರಣೆ ನಡೆಸುತ್ತಿಲ್ಲ. ಸರಕಾರ ಆದ್ಯತೆಯ ಮೇರೆಗೆ ಈ ಪ್ರಕರಣದ ವಿಚಾರಣೆಗೆ ಮುಂದಾಗಬೇಕಿತ್ತು. ಆದರೆ, ಆಗಿಲ್ಲ ಎಂದು ದೂರಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಧರಣಿ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News