ಸಿನೆಮಾ ಕತೆಗಾರರಿಂದ ಸಿನೆಮಾದ ಮೌಲ್ಯ ನಿರ್ಧಾರವಾಗುತ್ತದೆ: ರಾಜ್ಯಪಾಲ ವಜುಭಾಯಿ ವಾಲಾ

Update: 2019-02-28 15:45 GMT

ಬೆಂಗಳೂರು, ಫೆ.28: ವ್ಯಕ್ತಿಗಳ ಚಾರಿತ್ರ ನಿರ್ಮಾಣದಲ್ಲಿ ಸಿನೆಮಾ ಕ್ಷೇತ್ರದ ಪಾತ್ರ ದೊಡ್ಡದಿದ್ದು, ಸಿನೆಮಾ ಕತೆ, ಸಂಭಾಷಣೆ ಬರಹಗಾರರ ಮೇಲೆ ಸಿನೆಮಾದ ಮೌಲ್ಯ ನಿರ್ಧಾರವಾಗುತ್ತದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ವಾರ್ತಾ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ 11ನೆ ಅಂತರ್‌ರಾಷ್ಟ್ರೀಯ ಸಿನೆಮೋತ್ಸವದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಆಯ್ಕೆಗೊಂಡ ಅತ್ಯುತ್ತಮ ಸಿನೆಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಅತ್ಯುತ್ತಮ ಸಿನೆಮಾಗಳ ಪ್ರಭಾವದಿಂದ ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಡುವಂತಹ ದೊಡ್ಡ ನಾಯಕರು ಸೃಷ್ಟಿಯಾಗುತ್ತಾರೆ ಎಂಬುದಕ್ಕೆ ಮಹಾತ್ಮ ಗಾಂಧೀಜಿಯೆ ಸಾಕ್ಷಿಯಾಗಿದ್ದಾರೆ. ಸತ್ಯಹರಿಶ್ಚಂದ್ರ ಸಿನೆಮಾವನ್ನು ನೋಡಿದ ಗಾಂಧೀಜಿ, ತಮ್ಮ ಜೀವನದಲ್ಲಿ ಸತ್ಯ ಮತ್ತು ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡರು. ಈ ಮೌಲ್ಯಗಳಡಿಯಲ್ಲಿಯೆ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು ಎಂದು ತಿಳಿಸಿದರು.

ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕೈಗಾರಿಕೋದ್ಯಮ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಅದರ ಮುಂದುವರೆದ ಭಾಗವಾಗಿ ಜಗತ್ತಿನ ಸಿನೆಮಾ ಕ್ಷೇತ್ರದ ದಿಗ್ಗಜರು ರಾಜ್ಯದತ್ತ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಅಭಿನಂದಿಸಿದರು.

ಪೋಲ್ಯಾಂಡ್‌ನ ನಿರ್ದೇಶಕ ಕ್ರಿಸ್ತಾಫ್ ಝಾನುಸಿ ಮಾತನಾಡಿ, ಜಗತ್ತಿನ ಪುರಾತನ ನಾಗರಿಕತೆ ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಹೀಗಾಗಿ ಭಾರತ ತನ್ನದೆ ರೀತಿಯಲ್ಲಿ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಆಹಾರ ಪದ್ಧತಿಗಳಿಂದ ವೈವಿಧ್ಯತೆಗಳಿಂದ ಶ್ರೀಮಂತವಾಗಿದೆ. ಹೀಗಾಗಿ ಭಾರತದ ಸಿನೆಮಾ ಜಗತ್ತು ಪಾಶ್ಚಿಮಾತ್ಯ ಸಿನೆಮಾಗಳನ್ನು ಅನುಕರಣೆ ಮಾಡುವ ಗೋಜಿಗೆ ಹೋಗುವ ಅಗತ್ಯವಿಲ್ಲವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಮತ್ತಿತರರಿದ್ದರು.

ಪ್ರಶಸ್ತಿ ಪಡೆದ ಚಿತ್ರಗಳು

ಕನ್ನಡ ಸಿನೆಮಾ ವಿಭಾಗ

-ಮೊದಲ ಬಹುಮಾನ- ಮೂಕಜ್ಜಿಯ ಕನಸುಗಳು

-ಎರಡನೆ ಬಹುಮಾನ-ಸಾವಿತ್ರಿ ಬಾಫುಲೆ

-ಮೂರನೆ ಬಹುಮಾನ-ರಾಮನ ಸವಾರಿ

-ನೆಟ್‌ಪ್ಯಾಕ್ ಅಂತರ್‌ರಾಷ್ಟ್ರೀಯ ತೀರ್ಪುಗಾರರಿಂದ ಮೆಚ್ಚುಗೆ ಪಡೆದ ಸಿನೆಮಾ-ನಾತಿಚರಾಮಿ

ಜನಪ್ರಿಯ ಸಿನೆಮಾ ವಿಭಾಗ

-ಮೊದಲ ಬಹುಮಾನ-ಕೆಜಿಎಫ್ ಚಾಪ್ಟರ್-1

-ಎರಡನೆ ಬಹುಮಾನ-ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

-ಮೂರನೆ ಬಹುಮಾನ-ಟಗರು

-ಅತ್ಯುತ್ತಮ ಭಾರತೀಯ ಸಿನೆಮಾ ಪ್ರಶಸ್ತಿ- ಘೋಡೆ ಕೋ ಜಲೇಬಿ ಲೆ ಜಾ ರಿಯಾ ಹೂಂ

-ಅತ್ಯುತ್ತಮ ಏಷ್ಯನ್ ಸಿನೆಮಾ ಪ್ರಶಸ್ತಿ- ಶಿವರಂಜನಿಯುಂ ಇನ್ನುಂ ಸಿಲ ಪೆಂಗಳುಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News