ಸೀಟು ಹಂಚಿಕೆ ಬಗ್ಗೆ ಮಾ.4 ರಂದು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ದಿನೇಶ್ ಗುಂಡೂರಾವ್

Update: 2019-03-02 14:08 GMT

ಬೆಂಗಳೂರು, ಮಾ.2: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಸೀಟು ಹಂಚಿಕೆ ವಿಚಾರವು ಮಾ.4ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನೇಕಾರ, ಕುರಹಿನ ಶೆಟ್ಟಿ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ಷೇತ್ರಗಳ ಹಂಚಿಕೆಯಾಗುವವರೆಗೆ ಯಾರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಕ್ಷೇತ್ರಗಳ ಹಂಚಿಕೆಯಾಗುತ್ತಿದ್ದಂತೆ ಉಭಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಾರೆ. ಆದುದರಿಂದ, ಯಾವುದೇ ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸುಮಲತಾ ಅಂಬರೀಶ್ ಪಟ್ಟು ಹಿಡಿದಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅಂಬರೀಶ್ ನಮ್ಮ ಪಕ್ಷದ ಹಿರಿಯ ನಾಯಕ, ಧುರೀಣ. ಈ ಹಿನ್ನೆಲೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯುವ ಬಗ್ಗೆ ಅವರ ಪತ್ನಿ ಸುಮಲತಾ ಕೇಳುವುದರಲ್ಲಿ ತಪ್ಪೇನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದು ಅವರು ಹೇಳಿದರು.

ಪಕ್ಷ ಸೇರ್ಪಡೆ: ನೇಕಾರ, ಕುರಹಿನ ಶೆಟ್ಟಿ ಸಮುದಾಯದ 30ಕ್ಕೂ ಹೆಚ್ಚು ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಸಣ್ಣ ಸಣ್ಣ ಸಮಾಜಗಳಿವೆ, ಅವರನ್ನು ಗುರುತಿಸಿ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಪಕ್ಷ. ಎಲ್ಲ ಸಮಾಜಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ, ಅವರು ತಮ್ಮ ಸ್ವಂತ ಶಕ್ತಿಯ ಬೆಳೆಯುವಂತಾಗಬೇಕು ಎಂಬುದು ನಮ್ಮ ನಂಬಿಕೆ. ದೊಡ್ಡ ದೊಡ್ಡ ಸಮುದಾಯಗಳು ಆರ್ಥಿಕ, ರಾಜಕೀಯ ಹಾಗೂ ಜನಸಂಖ್ಯೆಯ ಬಲದೊಂದಿಗೆ ಅಭಿವೃದ್ಧಿ ಹೊಂದುತ್ತವೆ. ಅದೇ ರೀತಿ ಸಣ್ಣ ಸಣ್ಣ ಸಮಾಜಗಳನ್ನು ಬೆಳೆಸಬೇಕಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ರಾಜ್ಯದಲ್ಲಿನ ನೇಕಾರ, ಕುರಹಿನ ಶೆಟ್ಟಿಯಂತಹ ಸಣ್ಣ ಸಣ್ಣ ಸಮಾಜಗಳ, ಪಂಗಡಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಣ್ಣ ಸಣ್ಣ ಸಮುದಾಯಗಳ ಪ್ರತಿನಿಧಿಗಳು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು.

ನೇಕಾರ, ಕುರಹಿನ ಶೆಟ್ಟಿ ಸಮುದಾಯದ ಮುಖಂಡರಾದ ಬೆಳ್ಳಿ ಚುಕ್ಕಿ ವಿರೇಶ್, ಲಕ್ಷ್ಮಿಕಾಂತ್, ದೇವಿಕಾ ಭಾನು, ರೂಪಾ, ರಮೇಶ್ ಸೇರಿದಂತೆ 30ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರಿನಿಂದ ನಿಖಿಲ್- ಅಂತಿಮವಲ್ಲ

ಮೈಸೂರು ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕುರಿತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಜಿ.ಟಿ.ದೇವೇಗೌಡ ಹೇಳಿದ್ದು ಅಂತಿಮವಲ್ಲ. ಈ ವಿಚಾರವನ್ನು ಅವರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದರೆ, ಪ್ರತಿಕ್ರಿಯಿಸಬಹುದಿತ್ತು. ನಾವು ಕ್ಷೇತ್ರಗಳ ಹಂಚಿಕೆ ಮಾಡಿಕೊಳ್ಳದೆ, ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News