ದೇಶವನ್ನು ಪಾಕಿಸ್ತಾನ ಮಾಡಲು ಹೊರಟ ಬಿಜೆಪಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕೆ

Update: 2019-03-02 14:19 GMT

ಬೆಂಗಳೂರು, ಮಾ. 2: ಭಾರತ ದೇಶವನ್ನು ಬಿಜೆಪಿ, ಮೂಲಭೂತವಾದಿಗಳ ಕೇಂದ್ರ ಸ್ಥಾನದಂತಾಗಿರುವ ಪಾಕಿಸ್ತಾನ ಮಾಡಲು ಹೊರಟಿದ್ದು, ದೇವರ ಹೆಸರಿನಲ್ಲಿ ಜನರನ್ನು ಕೊಲ್ಲುವ ಸರಕಾರ ದೇಶದಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಶನಿವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದಿಂದ ಏರ್ಪಡಿಸಿದ್ದ ಚುನಾವಣಾ ಚಿಂತನ-ಮಂಥನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದಿ ಸರಕಾರ ಆಡಳಿತದಲ್ಲಿದ್ದು, ಎಲ್ಲರಲ್ಲಿಯೂ ಭೀತಿ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲಿ ಅತ್ಯಂತ ಕೆಟ್ಟ ಸರಕಾರ ಆಡಳಿತದಲ್ಲಿದ್ದು, ಈ ಸರಕಾರ ಮತ್ತು ಕೆಟ್ಟ ಚಿಂತನೆಗಳನ್ನು ತೊಲಗಿಸಬೇಕಿದೆ. ಬಲಪಂಥೀಯ ಚಿಂತನೆ ದೇಶದಲ್ಲಿ ಬಲಗೊಳ್ಳುತ್ತಿದೆ. ಹೀಗೆ ಮುಂದುವರೆದಲ್ಲಿ ದೇಶದ ಸ್ಥಿತಿ ಏನಾಗಲಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ಹೆಚ್ಚು ಮಹತ್ವ ಪಡೆದಿದೆ ಎಂದರು.

ಪಾಕಿಸ್ತಾನ ಮಾದರಿಯಲ್ಲೇ ಭಾರತವೂ ಮೂಲಭೂತವಾದಿ ರಾಷ್ಟ್ರ ಆಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ಗೋವಿಂದ ಪನ್ಸಾರೆ ಸೇರಿದಂತೆ ಹಲವು ಮಂದಿ ವಿಚಾರವಾದಿಗಳನ್ನು ಕೊಂದವರು ಯಾರು ಎಂದು ಪ್ರಶ್ನಿಸಿದ ಅವರು, ಇಂತಹದ್ದನ್ನೆ ತಿನ್ನಬೇಕು? ಹೀಗೆ ಬದುಕಬೇಕೆಂಬ ಮನಸ್ಥಿತಿ ಸರಿಯಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಹಳಿ ತಪ್ಪಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೆ ಆತಂಕ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದ ಅವರು, ಸರ್ವಾಧಿಕಾರದಡಿ ದೇಶ ಮುನ್ನಡೆಯುತ್ತಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಎಲ್ಲವನ್ನು ಮುಗಿಸಲಿದ್ದಾರೆ. ಹೀಗಾಗಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಲ್ಲ, ನಮ್ಮವರೇ ಪ್ರಧಾನಿಯಾಗಬೇಕೆಂಬ ಇಚ್ಛೆಯೂ ಇಲ್ಲ. ಆದರೆ, ದೇಶದಲ್ಲಿರುವ ಕೋಮುವಾದಿ ಸರಕಾರ ತೊಲಗಬೇಕು ಎಂದು ಅವರು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ್, ಶಾಸಕ ಸೌಮ್ಯರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News