ವಿದ್ಯುತ್ ಸ್ಪರ್ಶ: ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿ ತಂದೆ ಮೃತ್ಯು

Update: 2019-03-02 14:22 GMT

ಬೆಂಗಳೂರು, ಮಾ. 2: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಕಂಬ ಉರುಳಿಬಿದ್ದು ವಿದ್ಯುತ್ ಹರಿದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭದ್ರತಾ ಸಿಬ್ಭಂದಿ(ಗನ್ ಮ್ಯಾನ್) ಉಮೇಶ್ ಅವರ ತಂದೆ ಮೃತಪಟ್ಟಿದ್ದಾರೆ.

ಶಿವಗಂಗೆಯ ಕಾಚಾರನಳ್ಳಿಯ ರಾಮಕೃಷ್ಣಯ್ಯ (64) ಮೃತಪಟ್ಟಿದ್ದು, ಅವರ ಪತ್ನಿ ರೇವಣ್ಣಮ್ಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಢಿಕ್ಕಿ ಹೊಡೆದ ಕಾರು ಚಾಲಕ ಸೇರಿ ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂ. ಗ್ರಾಮಾಂತರ ಎಸ್ಪಿ ಶಿವಕುಮಾರ್ ಹೇಳಿದ್ದಾರೆ.

ದಾಬಸ್‌ಪೇಟೆಯಿಂದ ಇಂಡಿಕಾ ಕಾರಿನಲ್ಲಿ ವೇಗವಾಗಿ ಬಂದ ಮೂವರು ಕಾಚಾರನಳ್ಳಿ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಕಂಬ ಉರುಳಿಬಿದ್ದಿದ್ದು, ಪರಿಣಾಮ ವಿದ್ಯುತ್ ಸನಿಹದಲ್ಲಿದ್ದ ಮನೆಗೆ ಹರಿದು ರಾಮಕೃಷ್ಣಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್ ತಗುಲಿ ಅವರ ಪತ್ನಿ ರೇವಣ್ಣಮ್ಮ ಗಾಯಗೊಂಡಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ದಾಬಸ್‌ಪೇಟೆ ಠಾಣಾ ಪೊಲೀಸರು, ಬೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿ ಕಾರಿನಲ್ಲಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News