ರಾಜ್ಯ ವಕ್ಫ್ ಮಂಡಳಿ ಚುನಾವಣೆ: 883 ಮತಗಳ ಚಲಾವಣೆ

Update: 2019-03-02 16:03 GMT

ಬೆಂಗಳೂರು, ಮಾ.2: ರಾಜ್ಯ ವಕ್ಫ್ ಮಂಡಳಿಗೆ ಶನಿವಾರ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ಕಂದಾಯ ವಿಭಾಗದಲ್ಲಿ ನಡೆದ ಚುನಾವಣೆಯಲ್ಲಿ ಮುತವಲ್ಲಿ ವಿಭಾಗದಡಿಯಲ್ಲಿ 913 ಮತಗಳ ಪೈಕಿ ಒಟ್ಟು 883 ಮತಗಳು ಚಲಾವಣೆಯಾಗಿವೆ.

ಬೆಂಗಳೂರು ವಿಭಾಗದಲ್ಲಿ 312 ಮತಗಳ ಪೈಕಿ 307 ಮತಗಳು, ಮೈಸೂರು ವಿಭಾಗದಲ್ಲಿ 209 ಮತಗಳ ಪೈಕಿ 197 ಮತಗಳು, ಬೆಳಗಾವಿ ವಿಭಾಗದಲ್ಲಿ 177 ಮತಗಳ ಪೈಕಿ 174 ಹಾಗೂ ಕಲಬುರ್ಗಿ ವಿಭಾಗದಲ್ಲಿ 215 ಮತಗಳ ಪೈಕಿ 205 ಮತಗಳು ಚಲಾವಣೆಯಾಗಿವೆ.

ಮುತವಲ್ಲಿ ವಿಭಾಗದಡಿಯಲ್ಲಿ ಇಬ್ಬರು ಸದಸ್ಯರನ್ನು ಚುನಾಯಿಸಲು ನಡೆದ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಅಬ್ದುಲ್ಲಾ ಸಲೀಮ್, ಚಿತ್ರದುರ್ಗ ಜಿಲ್ಲೆಯ ಕೆ.ಅನ್ವರ್ ಬಾಷಾ, ಕಲಬುರ್ಗಿ ಜಿಲ್ಲೆಯ ಅಶ್ಫಾಕ್ ಅಹ್ಮದ್ ಸಿದ್ದೀಖಿ, ಬೆಂಗಳೂರಿನ ಪಿ.ಸಿ.ಬಶೀರ್, ಬಳ್ಳಾರಿಯ ಎಸ್.ಮುಹಮ್ಮದ್ ಗೌಸ್ ಬಾಷಾ, ಬೆಂಗಳೂರಿನ ಡಾ.ಮುಹಮ್ಮದ್ ಯೂಸುಫ್. ಮಂಗಳೂರಿನ ಬಿ.ಮುಖ್ತಾರ್ ಅಹ್ಮದ್, ಬೆಂಗಳೂರಿನ ನಿಯಾಝ್ ಅಹ್ಮದ್ ಶರೀಫ್, ಮೈಸೂರಿನ ಶಫೀವುಲ್ಲಾ ಬೇಗ್, ಬೆಂಗಳೂರಿನ ಸುಭಾನ್ ಶರೀಫ್, ನಿವೃತ್ತ ಕೆಎಎಸ್ ಅಧಿಕಾರಿ ಸೈಯ್ಯದ್ ಏಜಾಝ್ ಅಹ್ಮದ್, ಗದಗ ಜಿಲ್ಲೆಯ ಸೈಯ್ಯದ್ ಮಹಬೂಬ್, ದಾವಣಗೆರೆಯ ಸೈಯ್ಯದ್ ಸೈಫುಲ್ಲಾ ಹಾಗೂ ಹಾವೇರಿ ಜಿಲ್ಲೆಯ ಝಿಶಾನ್ ಅಹ್ಮದ್‌ಖಾನ್ ಪಠಾಣ್ ಸೇರಿ ಒಟ್ಟು 14 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಶಾಸಕಾಂಗ ವಿಭಾಗದಡಿಯಲ್ಲಿ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಕಣದಲ್ಲಿ ಶಾಸಕಿ ಕನಿಝ್ ಫಾತಿಮಾ, ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಶದ್ ಹಾಗೂ ಶಾಸಕ ತನ್ವೀರ್ ಸೇಠ್ ಇದ್ದರು. ಅಂತಿಮವಾಗಿ ಮತದಾನಕ್ಕೆ ಒಂದು ದಿನ ಮುನ್ನ ರಿಝ್ವನ್ ಅರ್ಶದ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.

ಈ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಗೆ ಶಾಸಕಾಂಗ ವಿಭಾಗದಡಿಯಲ್ಲಿ ಶಾಸಕರಾದ ಕನಿಝ್ ಫಾತಿಮಾ ಹಾಗೂ ತನ್ವೀರ್ ಸೇಠ್ ಆಯ್ಕೆ ಬಹುತೇಕ ಖಚಿತವಾಗಿದೆ. ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರೊಬ್ಬರನ್ನು ವಕ್ಫ್ ಮಂಡಳಿಗೆ ಸದಸ್ಯರನ್ನಾಗಿ ಮಾಡಬೇಕಿದ್ದು, ಹಾಲಿ ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್ ನೇರವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಬಾರ್ ಕೌನ್ಸಿಲ್‌ನಿಂದ ವಕೀಲ ಆಸಿಫ್ ಅಲಿ ಶೇಖ್ ಹುಸೇನ್ ರನ್ನು ವಕ್ಫ್ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿ ನಡೆದಿರುವ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಮಾ.7ರಂದು ಬೆಂಗಳೂರಿನ ಡಿಕೆನ್ಸನ್ ರಸ್ತೆಯಲ್ಲಿರುವ ಮುಸ್ಲಿಮ್ ಅನಾಥಾಶ್ರಮದಲ್ಲಿ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News