ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ಸಂಘಟಿತರಾಗುವ ಅಗತ್ಯವಿದೆ: ಡಾ.ರುತ್ ಮನೋರಮಾ

Update: 2019-03-02 16:08 GMT

ಬೆಂಗಳೂರು, ಮಾ.2: ಇಂದಿಗೂ ಮಹಿಳೆಯರ ಮೇಲೆ ನಿರ್ಭಯವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಶೋಷಿತ ಸಮುದಾಯದವರನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ಹೀಗಾಗಿ, ಮಹಿಳೆಯರ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿಸರ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟ ಸಂಘಟಿಸುವ ಅಗತ್ಯ ಇದೆ ಎಂದು ವುಮೆನ್ಸ್ ವಾಯ್ಸ್‌ನ ಪ್ರಧಾನ ಕಾರ್ಯದರ್ಶಿ ಡಾ.ರುತ್ ಮನೋರಮಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರ್‌ರಾಷ್ಟ್ರೀಯ ದುಡಿಯುವ ಮಹಿಳೆ ದಿನಾಚರಣೆ ಅಂಗವಾಗಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ವುಮೆನ್ಸ್ ವಾಯ್ಸ್ ವತಿಯಿಂದ ಪುರಭವನದ ಮುಂದೆ ಏರ್ಪಡಿಸಿದ್ದ ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದಲಿತ ಮಹಿಳೆಯರು ಶೋಷಿತ ವರ್ಗಕ್ಕೆ ಸೇರಿದವರೆನ್ನುವ ಕಾರಣದ ಮೇಲೆ ಲಿಂಗ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ, ದೇವದಾಸಿ ಪದ್ಧತಿ ಹೆಸರಿನಲ್ಲಿ ದೇವಸ್ಥಾನಗಳಲ್ಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವೆ ರಾಣಿಸತೀಶ್ ಮಾತನಾಡಿ, ಮಹಿಳೆಯರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿ, ಸಾಕಷ್ಟು ಪರಿಹಾರವನ್ನು ಕಂಡುಕೊಳ್ಳಲಾಗಿದ್ದರೂ ದೌರ್ಜನ್ಯ ಇಂದಿಗೂ ಮುಂದುವರಿಯುತ್ತಿದೆ. ಮಹಿಳೆಯರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ನಮ್ಮ ಹೋರಾಟವನ್ನು ಸಂಸತ್‌ವರೆಗೂ ಕೊಂಡೊಯ್ಯಲಾಗುವುದು. ರಾಜ್ಯ ಸರಕಾರದೊಂದಿಗೆ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.

ಸಂವಿಧಾನ ರಕ್ಷಣೆಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ವಿವಿಧ ಮಹಿಳಾ ಸಂಘಟನೆಗಳು ಕೈಗೊಳ್ಳುವ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

ವುಮೆನ್ಸ್ ವಾಯ್ಸ್‌ನ ಸಂಚಾಲಕಿ ಸಹತಾಜ್, ಸೌಮ್ಯಾ ರೆಡ್ಡಿ, ಜ್ಯೋತಿರಾಜ್, ಸಮೀನಾ ಬೇಗಂ, ರಮೇಶ್, ಸದಾ ರಮೇಶ್, ಸುನೀತಾ, ಮೀನಾ ಸೇರಿದಂತೆ ನೂರಾರು ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News