ರಾಜಧಾನಿಯಲ್ಲಿ ಬಿಸಿಲಿನ ತಾಪ: ಎಳನೀರಿಗೆ ಭಾರೀ ಬೇಡಿಕೆ, ಬೆಲೆಯೂ ಏರಿಕೆ

Update: 2019-03-03 13:15 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.3: ರಾಜಧಾನಿಯಲ್ಲಿ ದಿನೇ ದಿನೆ ಬೇಸಿಗೆಯ ತಾಪ ಅಧಿಕವಾಗುತ್ತಿದ್ದು, ಎಳನೀರಿನ ಪೂರೈಕೆಯಲ್ಲಿ ವ್ಯತ್ಯಯ, ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಹಾಗೂ ಸಾಗಾಣಿಕೆ ವೆಚ್ಚ ದುಬಾರಿ ಆಗಿದ್ದರೂ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಗಗನಕ್ಕೇರಿದೆ.

ಉದ್ಯಾನವನದಲ್ಲಿ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿದ್ದು, ಸಾರ್ವಜನಿಕರು ಎಳನೀರಿನ ಕಡೆ ಮುಖ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದರಿಂದ, ದಿನಕ್ಕೆ ಎರಡು ಎಳನೀರು ಕುಡಿಯುವವರು ಒಂದಕ್ಕೆ ತೃಪ್ತಿಪಟ್ಟು ಕೊಳ್ಳುತ್ತಿದ್ದಾರೆ. ಕಳೆದ ವಾರ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಳನೀರು ಬಂದಿದ್ದರಿಂದ ಅಲ್ಪಮಟ್ಟಿಗೆ ಬೆಲೆ ಕಡಿಮೆಯಾಗಿತ್ತು. ಆದರೆ, ಪ್ರಸ್ತುತ ಅಂತರ್ ರಾಜ್ಯದ ಎಳನೀರು ಕಡಿಮೆಯಾಗಿದ್ದು, ಬೆಲೆ ತಾರಕಕ್ಕೇರಿದೆ.

ಸಣ್ಣಗಾತ್ರದ ಎಳನೀರು 20 ರೂ.ದಿಂದ ಆರಂಭವಾಗಿ 25, 30, 35 ರೂ. ವರೆಗೂ ಬೆಲೆ ನಿಗದಿಯಾಗಿದೆ. ಜನರು ಮದ್ದೂರು ಎಳನೀರನ್ನೇ ಹೆಚ್ಚಾಗಿ ಕೇಳುವುದರಿಂದ ಬೆಂಗಳೂರಿಗೆ ಮದ್ದೂರಿನ ಎಳನೀರು ಬರುತ್ತಿದ್ದು, ನಾವು ಹೇಳುವ ಸ್ಥಳಕ್ಕೆ ಬಂದು ಎಳನೀರು ಹಾಕುತ್ತಾರೆ. ಗುಣಮಟ್ಟ ಮತ್ತು ಹೆಚ್ಚು ನೀರು ಇರುವ ಎಳನೀರಿಗೆ ಬೆಲೆ ಜಾಸ್ತಿ ಇದೆ ಎನ್ನುತ್ತಾರೆ ನಗರದ ಎಳನೀರು ವ್ಯಾಪಾರಿಗಳು.

ಬೆಲೆ ಏರಿಕೆಗೆ ಮಧ್ಯವರ್ತಿ ಕಾರಣ: ಎಳನೀರಿನ ಬೆಲೆ ಏರಿಕೆಗೆ ಮಧ್ಯವರ್ತಿಗಳ ಹಾವಳಿಯೇ ಕಾರಣವಾಗಿದೆ. ನೇರ ರೈತರಿಂದ 10 ರೂ.ಗೆ ಎಳೆ ನೀರು ಪಡೆದು ವ್ಯಾಪಾರಸ್ಥರಿಗೆ 20ರಿಂದ 25 ರೂ.ವರೆಗೆ ನೀಡುತ್ತಿದ್ದು, ಇದರಿಂದ ಬೆಲೆ ಏರಿಕೆಯಾಗಿದೆ. ಮಧ್ಯವರ್ತಿಗಳ ಬಳಿ ಹೋಗಿ ಎಳನೀರು ಕೊಂಡರೆ, ಒಂದಕ್ಕೆ 20 ರೂ.ರಂತೆ ಕೊಡುತ್ತಾರೆ. ಅವರೇ ನಾವಿರುವ ಕಡೆ ಎಳನೀರು ಹಾಕಿದರೆ 25 ರೂ.ನಂತೆ ಪಡೆಯುತ್ತಾರೆ. ಆದ್ದರಿಂದ ನಾವು ಗ್ರಾಹಕರಿಗೆ 30 ರೂ. ಬೆಲೆ ನಿಗದಿ ಮಾಡಿದ್ದೇವೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

ಎಲ್ಲೆಲ್ಲಿ ದುಬಾರಿ: ನಗರದ ಜನನಿಬಿಡದ ಪ್ರದೇಶಗಳು, ಪ್ರಮುಖ ವೃತ್ತಗಳು, ಬಸ್ ಹಾಗೂ ರೈಲು ನಿಲ್ದಾಣ, ಆಸ್ಪತ್ರೆ, ದೇವಸ್ಥಾನ ಇತ್ಯಾದಿ ಜನ ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಪ್ರಮುಖ ರಸ್ತೆಗಳ ಜಂಕ್ಷನ್‌ಗಳಲ್ಲಿ ಇರುವ ಎಳನೀರು ಅಂಗಡಿಗಳಲ್ಲಿ ಬೆಲೆ 35 ರೂ. ತಲುಪಿದೆ. ಜನವಸತಿ ಪ್ರದೇಶ, ಸಣ್ಣ ಪುಟ್ಟ ರಸ್ತೆ, ಗಲ್ಲಗಳಲ್ಲಿ ಹಾಕಿಕೊಂಡಿರುವ ಎಳನೀರು, ತಳ್ಳಗಾಡಿಗಳಲ್ಲಿ ತರುವ ಸಣ್ಣಗಾತ್ರದ ಎಳನೀರು ಬೆಲೆ ಅಷ್ಟಾಗಿ ಹೆಚ್ಚಾಗಿಲ್ಲ. ಆಸ್ಪತ್ರೆ ಸಮೀಪ ಇರುವ ಎಳನೀರಿನ ಬೆಲೆ 40 ರೂ. ತಲುಪಿದೆ.

ಶೇ.60 ರಷ್ಟು ಮದ್ದೂರಿನ ಎಳನೀರು: ರಾಜಧಾನಿಗೆ ಬರುವ ಎಳನೀರಿನ ಶೇ.60ರಷ್ಟು ಹೆಚ್ಚು ಪಾಲು ಮದ್ದೂರಿನದ್ದಾಗಿದೆ. ಉಳಿದಂತೆ ಕೆ.ಆರ್.ಪೇಟೆ, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಿಂದ ಪೂರೈಕೆ ಆಗುತ್ತದೆ. ಇದಲ್ಲದೇ ಇನ್ನೊಂದು ವರ್ಗವಿದೆ. ಬೆಂಗಳೂರು ಹೊರವಲಯದ ನಾನಾ ಭಾಗದಿಂದ ನೇರವಾಗಿ ರೈತರೇ ಆಗಮಿಸಿ ಚಾಮರಾಜ ಪೇಟೆಯ ಟಿ.ಆರ್.ಮಿಲ್, ಈದ್ಗಾ ಮೈದಾನ ಸೇರಿದಂತೆ ಹಲವು ತಾಣಗಳಿಗೆ ತಂದು ಲೋಡ್ ಮಾಡಿಕೊಳ್ಳುತ್ತಾರೆ ಎಂದು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News