ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Update: 2019-03-03 13:16 GMT

ಬೆಂಗಳೂರು, ಮಾ. 3: ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇವೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ರವಿವಾರ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷಗಳು ಬೇರೆ ಬೇರೆ ಇರಬಹುದು. ಆದರೆ, ಅಭಿವೃದ್ಧಿ ವಿಷಯ ಬಂದಾಗ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಕೇಂದ್ರ ಸರಕಾರ ನೀಡುವ ಅನುದಾನವನ್ನು ವಾರ್ಡ್ ಮಟ್ಟಕ್ಕೆ ತಲುಪಿಸುವುದು ರಾಜ್ಯ ಸರಕಾರ, ಜನಪ್ರತಿನಿಧಿಗಳ ಕರ್ತವ್ಯ ಎಂದ ಅವರು, ನಾವು ಚುನಾವಣೆಗಳಲ್ಲಿ ಮಾತ್ರ ಎದುರಾಗಳಿಗಳಾಗಬೇಕೆ ಹೊರತು ಇತರೆ ಸಂದರ್ಭಗಳಲ್ಲಿ ಅಲ್ಲ. ರಾಜ್ಯದಿಂದ ನೆರವು ಕೋರಿ ಯಾರೇ ಬಂದರೂ ಅವರಿಗೆ ಸಹಾಯ ಮಾಡಲು ನಾವು ಸಿದ್ಧ. ಇದರಲ್ಲಿ ಯಾವುದೇ ಪಕ್ಷಬೇಧ ಮಾಡುವುದಿಲ್ಲ ಎಂದರು.

ಕೇಂದ್ರ 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿ ಕೊಡುವ ಸಂಕಲ್ಪ ಹೊಂದಿದೆ. ಈ ಯೋಜನೆ ಯಶಸ್ವಿಯಾಗಬೇಕಾದರೆ ರಾಜ್ಯ ಸರಕಾರಗಳ ಸಹಕಾರ ಬಹಳ ಮುಖ್ಯ ಎಂದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಸಂಸದರು, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಎಂದೂ ತಾರತಮ್ಯವಾಗಿಲ್ಲ. ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಯಿದ್ದರೆ ಕ್ಷೇತ್ರಗಳ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಪ್ರತಿಯೊಬ್ಬರಲ್ಲೂ ದೇಶಭಕ್ತಿ ಇರಬೇಕು. ದೇಶಕ್ಕಾಗಿ ತಮ್ಮಿಂದ ಸಾಧ್ಯವಾದ ಕೊಡುಗೆ ನೀಡಬೇಕು ಎಂದ ಅವರು, ಮಹಾಲಕ್ಷ್ಮಿ ಲೇಔಟ್‌ನ ಕ್ಷೇತ್ರದ ಶಾಸಕ ಗೋಪಾಲಯ್ಯ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಇದೇ ವೇಳೆ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಸಕ ಗೋಪಾಲಯ್ಯ, ಬಿಬಿಎಂಪಿ ಸದಸ್ಯರಾದ ಹೇಮಲತಾ ಗೋಪಾಲಯ್ಯ, ಮಹದೇವು, ರಾಜೇಂದ್ರಕುಮಾರ್, ಮಾಜಿ ಸದಸ್ಯ ಎಸ್.ಹರೀಶ್, ಮಹಾಲಕ್ಷ್ಮಿ ಲೇಔಟ್ ಕಸಾಪ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News