ಸಣ್ಣ ಉದ್ದಿಮೆದಾರರ ಸಮಸ್ಯೆ ಚರ್ಚಿಸಲು ಸಮಯ ಮೀಸಲು: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-03-05 16:13 GMT

ಬೆಂಗಳೂರು, ಮಾ.5: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಅಭಿವೃದ್ಧಿಯಾದರೆ ಮಾತ್ರ ರಾಜ್ಯ ಅಭಿವೃದ್ಧಿ ಸಾಧ್ಯ. ಹೀಗಾಗಿ, ಸಣ್ಣ ಉದ್ದಿಮೆದಾರರ ಸಮಸ್ಯೆ ಕುರಿತು ಚರ್ಚಿಸಲು ತಿಂಗಳಲ್ಲಿ 1ರಿಂದ 2 ಗಂಟೆ ಸಮಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ನಗರದ ಕಾಸಿಯಾ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ವತಿಯಿಂದ ಏರ್ಪಡಿಸಿದ್ದ ಕೆಎಸ್‌ಎಫ್ಸಿ ಮತ್ತು ಇತರೆ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸಣ್ಣ ಉದ್ದಿಮೆಯ ಕ್ಷೇತ್ರ ನಿವಾರಿಸುತ್ತದೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು ಸೇರಿದಂತೆ ಎಲ್ಲರೊಂದಿಗೆ ವಿವಿಧ ಹಂತಗಳಲ್ಲಿ ಚರ್ಚೆಯನ್ನು ನಡೆಸುತ್ತಿದ್ದೇನೆ. ಅದೇ ರೀತಿಯಲ್ಲಿ ಒಂದೆರಡು ಗಂಟೆ ಸಣ್ಣ ಉದ್ದಿಮೆದಾರರ ಸಮಸ್ಯೆ ಕುರಿತು ಚರ್ಚಿಸಲು ಅವಕಾಶ ನೀಡುತ್ತೇನೆ ಎಂದು ಹೇಳಿದರು.

ಪ್ರತಿ ಇಲಾಖಾವಾರು ಯಾವ -ಯಾವ ಸಲವತ್ತು ಸಣ್ಣ ಉದ್ದಿಮೆಗಳಿಗೆ ಸಿಗುತ್ತವೆ ಅವೆಲ್ಲವನ್ನೂ ಒದಗಿಸಲಾಗುವುದು. ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್ ಇನ್ನೋವೇಶನ್ ನಿರ್ಮಾಣಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡಲಾಗುವುದು ಎಂದರು.

ಸರಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 11 ಸಾವಿರ ಕೋಟಿಗೂ ಅಧಿಕ ಹಣ ಸಾಲಮನ್ನಾಕ್ಕೆ ನೀಡಲಾಗಿದೆ. ಆರ್ಥಿಕ ಶಿಸ್ತು ಮೀರದೆ ಸಾಲಮನ್ನಾ ಸೇರಿದಂತೆ ಇತರೆ ಯೋಜನೆಗಳಿಗೆ ಹಣ ನೀಡಲಾಗಿದೆ. ಉದ್ದಿಮೆಗಳ ಸಾಲ ಮರುಪಾವತಿ 5 ವರ್ಷದಿಂದ 10 ವರ್ಷಕ್ಕೆ ವಿಸ್ತರಿಸಲು ಚರ್ಚಿಸಲಾಗುವುದು. 9 ಜಿಲ್ಲೆಗಳಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ನಿರ್ಮಾಣಕ್ಕೆ ಚಿಂತಿಸಲಾಗಿದ್ದು, ಕೊಪ್ಪಳದಲ್ಲಿ ಆರಂಭಿಸಲಾಗಿದೆ. ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಶಾಸಕ ವಿ.ಸೋಮಣ್ಣ ಮಾತನಾಡಿ, ಹತ್ತಾರು ಕುಟುಂಬಕ್ಕೆ ಜೀವನ ಒದಗಿಸುವ ಸಣ್ಣ ಉದ್ದಿಮೆಗಳು ಅಭಿವೃದ್ಧಿಯಾಗಬೇಕಿದೆ. ನನಗೂ ಮತ್ತು ಕಾಸಿಯಾ ಸಂಸ್ಥೆಗೆ 37 ವರ್ಷದ ಅನುಬಂಧವಿದೆ. ಉದ್ದಿಮೆದಾರರ ಸಮಸ್ಯೆಗಳ ಚರ್ಚೆಗೆ ಮುಖ್ಯಮಂತ್ರಿಗಳು ಸಮಯ ನೀಡಿದ್ದು ಪ್ರಶಂಸನೀಯ. ಉದ್ದಿಮೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದ ಸವಲತ್ತುಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇದೇ ವೇಳೆ ಬಿ2ಬಿ ಮೊಬೈಲ್ ಆ್ಯಪನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕ ವೃಷಬೇಂದ್ರ ಮೂರ್ತಿ, ಕಾಸಿಯಾ ಅಧ್ಯಕ್ಷ ಬಸವರಾಜ, ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ.ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜಕೀಯದಲ್ಲಿ ಅದೃಷ್ಟ ಎನ್ನುವುದು ಒಬ್ಬರಿಗೆ ಸೀಮಿತವಾದದ್ದಲ್ಲ. ಕುಮಾರಸ್ವಾಮಿ 38 ಸೀಟು ಪಡೆದುಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ಬಿಜೆಪಿಗೆ ಇನ್ನು 8 ಸ್ಥಾನ ಹೆಚ್ಚು ಗೆದ್ದಿದ್ದರೆ ಅಡ್ಡಿಯಿಲ್ಲದೆ ಯಡಿಯೂರಪ್ಪ ಸಿಎಂ ಆಗುತ್ತಿದ್ದರು.

-ವಿ.ಸೋಮಣ್ಣ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News