ವಿದ್ಯಾರ್ಥಿ ಸಮುದಾಯದ ಸಮಸ್ಯೆ ಪರಿಹಾರವಾಗಬೇಕು: ಎಸ್‌ಐಓ

Update: 2019-03-05 17:17 GMT

ಬೆಂಗಳೂರು, ಮಾ. 5: ಶಿಕ್ಷಣ, ಉದ್ಯೋಗ ಮತ್ತು ವಿದ್ಯಾರ್ಥಿ ಸಮಸ್ಯೆಗಳ ಸಮಗ್ರ ಪರಿಹಾರಕ್ಕಾಗಿ ರಾಜಕೀಯ ಪಕ್ಷಗಳು ಕಾರ್ಯ ಪ್ರವೃತರಾಗಬೇಕೆಂದು ರಾಜ್ಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಆಗ್ರಹಿಸಿದೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಓದ ರಾಜ್ಯಾಧ್ಯಕ್ಷ ನಿಹಾಲ್ ಕಿಡಿಯೂರು, ರಾಷ್ಟ್ರದಾದ್ಯಂತ ವಿದ್ಯಾರ್ಥಿ ಸಮುದಾಯ ಮತ್ತು ಯುವಕರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರಕಾರಗಳು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ ತಾಳಿವೆ. ಹೀಗಾಗಿ, ಎಸ್‌ಐಓ ವತಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಲವು ಪ್ರಣಾಳಿಕೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಸಮುದಾಯದ ಪ್ರಣಾಳಿಕೆಯಲ್ಲಿ ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಹಾಗೂ ಪರಿಸರ ಕುರಿತಂತೆ ಹಲವು ವಿಷಯಗಳು ಅಡಕವಾಗಿದೆ. ಈ ಬಗ್ಗೆ ಸರಕಾರ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಹಲವು ಶಿಕ್ಷಣ ಆಯೋಗಗಳ ಶಿಫಾರಸ್ಸಿನಂತೆ ಶಿಕ್ಷಣದ ಮೇಲಿನ ವೆಚ್ಚದ ಪ್ರಮಾಣವನ್ನು ಜಿಡಿಪಿಯ ಶೇ.8 ರಷ್ಟಕ್ಕೆ ಏರಿಸುವುದು. ಮಕ್ಕಳ ಪೂರ್ವಭಾವಿ ಅವಕಾಶಕ್ಕೆ ಮತ್ತು ಸಮರ್ಥ ಅಭಿವೃದ್ಧಿಗಾಗಿ ಮಾತೃಭಾಷಾ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು. ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಕ್ಕೊಂದು ಶಾಲೆ ಸ್ಥಾಪಿಸಬೇಕೆಂದು ಒತ್ತಾಯ ಮಾಡಿದರು.

ಕೇಂದ್ರ ಸರಕಾರದ ಕೌಶಲ್ಯ ಭಾರತ ಯೋಜನೆಯಡಿ ತರಬೇತಿ ಪಡೆಯುವವರಿಗೆ ಪ್ರಮಾಣ ಪತ್ರ, ವೇತನ ಹಾಗೂ ಶೇ.100 ರಷ್ಟು ಉದ್ಯೋಗ ಖಾತ್ರಿ ನೀಡುವುದು. ಸರಕಾರಿ ಮತ್ತು ಸಾರ್ವಜನಿಕ ಹುದ್ದೆಗಳನ್ನು ಭರ್ತಿ ಮಾಡುವುದು. ಜಸ್ಟೀಸ್ ರಂಗನಾಥ್ ಮಿಶ್ರ ವರದಿಯಂತೆ ಧಾರ್ಮಿಕ ಅಲ್ಪ ಸಂಖ್ಯಾತ ಭಾಗಕ್ಕೆ ಸಾರ್ವಜನಿಕ ಸೇವೆ, ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News