ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ: 2ನೆ ಹಂತದ ಆನ್‌ಲೈನ್ ಅರ್ಜಿಗೆ ಆಹ್ವಾನ

Update: 2019-03-07 14:56 GMT

ಬೆಂಗಳೂರು, ಮಾ.7: ಬೆಂಗಳೂರು ನಗರದಲ್ಲಿ ಸರಕಾರಿ ಜಮೀನಿನಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆ’ಯಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಜಿ+3 ರಿಂದ ಎಸ್+14 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ, ಬೆಂಗಳೂರು ನಗರದಲ್ಲಿನ ವಸತಿ ರಹಿತರಿಗೆ ವಸತಿಯನ್ನು ಕಲ್ಪಿಸುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ.

ರಾಜ್ಯ ಮತ್ತು ಕೇಂದ್ರ ಸರಕಾರ ವಸತಿ ಯೋಜನೆಗಳಾದ ಡಾ.ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಸಹಾಯಧನವನ್ನು ಸಂಯೋಜಿಸಿಕೊಂಡು ಹಾಗೂ ಫಲಾನುಭವಿಗಳ ವಂತಿಕೆಯೊಂದಿಗೆ ಈ ಮನೆಗಳನ್ನು ನಿರ್ಮಿಸಲಾಗುತ್ತದೆ.

ಈ ಯೋಜನೆಯಡಿ ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈವರೆಗೂ 49,615 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಹ 48,614 ಅರ್ಜಿದಾರರಿಗೆ ಆಯ್ಕೆ ಪತ್ರವನ್ನು ನೀಡಲಾಗಿದೆ. ಈ ಯೋಜನೆಗಾಗಿ ರಾಜ್ಯ ಸರಕಾರವು 1014 ಎಕರೆ 10 ಗುಂಟೆ ಸರಕಾರಿ ಜಮೀನನ್ನು ಕಾಯ್ದಿರಿಸಿದೆ.

ಮೊದಲನೇ ಹಂತದಲ್ಲಿ 54 ಸ್ಥಳಗಳಲ್ಲಿ 46,499 ಮನೆಗಳ (38,646-1 ಬಿಎಚ್‌ಕೆ ಹಾಗೂ 7853-2 ಬಿಎಚ್‌ಕೆ) ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಡಿ 1 ಬಿಎಚ್‌ಕೆ ಮನೆಗೆ 8 ಲಕ್ಷ ರೂ.ಗಳನ್ನು ನಿಗದಿಪಡಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ 3.50 ಲಕ್ಷ ರೂ.ಮತ್ತು ಸಾಮಾನ್ಯ/ಇತರೆ ವರ್ಗದವರಿಗೆ 2.70 ಲಕ್ಷ ರೂ.ಗಳ ಸಹಾಯಧನ ಒಳಗೊಂಡಿರುತ್ತದೆ. ಉಳಿದ ಅನುದಾನ ಫಲಾನುಭವಿಗಳ ವಂತಿಕೆಯನ್ನು ಒಳಗೊಂಡಿರುತ್ತದೆ.

ಈ ಮನೆಗಳನ್ನು ಸ್ಕಾರ್‌ವಾಲ್/ಪ್ರೀ ಫ್ಯಾಬ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗುತ್ತಿದೆ. ಯೋಜನೆಯ ಬಡಾವಣೆಗಳಲ್ಲಿ ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ಸಂಸ್ಕರಣಾ, ರಸ್ತೆ, ಮಳೆ ನೀರು ಚರಂಡಿಗಳು, ವಿದ್ಯುತ್ ಸಂಪರ್ಕ, ಪ್ರತಿಯೊಂದು ಬ್ಲಾಕ್‌ಗೆ ಪ್ರತ್ಯೇಕ ನೀರಿನ ಸಂಪ್, ಸೋಲಾರ್ ವಿದ್ಯುತ್ ಸಂಪರ್ಕ ಹೊಂದಿರುವ ಬೀದಿ ದೀಪಗಳು, ಕಾಂಪೌಂಡ್ ಹಾಗೂ ಪ್ರವೇಶ ದ್ವಾರ, ಭದ್ರತಾ ಸಿಬ್ಬಂದಿ ಕೊಠಡಿ, ನೀರು ಸರಬರಾಜು ಮಾಡಲು ಪಂಪ್ ಹೌಸ್ ಹಾಗೂ ನಿಯಂತ್ರಣ ಕೊಠಡಿಯ ಸೌಲಭ್ಯವಿರುತ್ತದೆ.

ಮನೆಗಳ ನಿರ್ಮಾಣಕ್ಕೆ 9 ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಇವುಗಳ ಪೈಕಿ 7 ಪ್ಯಾಕೇಜ್‌ಗಳು ಅಂತಿಮಗೊಂಡಿದ್ದು(33,143 ಮನೆಗಳು ಇದರಲ್ಲಿ 1 ಬಿಎಚ್‌ಕೆ-28,167 ಮನೆಗಳು-2 ಬಿಎಚ್‌ಕೆ 4976 ಮನೆಗಳು), ಉಳಿದ 2 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. 2 ಬಿಎಚ್‌ಕೆ ಮನೆಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿಗಳನ್ನು ಶೀಘ್ರದಲ್ಲಿಯೇ ಕರೆಯಲಾಗುವುದು.

ಪ್ರಸ್ತುತ ಅಂತಿಮಗೊಳಿಸಲಾದ 7 ಪ್ಯಾಕೇಜ್‌ಗಳ ಪೈಕಿ 6 ಪ್ಯಾಕೇಜ್‌ಗಳಿಗೆ ಭೂಮಿ ಪೂಜೆ ಸಮಾರಂಭವನ್ನು ಮಾ.8ರಂದು ಮುಖ್ಯಮಂತ್ರಿ ನೆರವೇರಿಸುತ್ತಿದ್ದು, ಈ ಯೋಜನೆಯಡಿ 2ನೇ ಹಂತದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://ashraya.karnataka.gov.in ಅನ್ನು ವೀಕ್ಷಿಸಿ ಅಥವಾ ದೂರವಾಣಿ ಸಂಖ್ಯೆ 080-23118888 ಸ್ಪಂದನಾ ಸಹಾಯವಾಣಿಗೆ ಕರೆ ಮಾಡಬಹುದು ಎಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News