ಮಹಿಳಾ ದೃಷ್ಟಿಯಿಂದ ಗ್ರಹಿಸದ ಯೋಜನೆ ಅಭಿವೃದ್ದಿ ಕಾಣದು: ಪ್ರಕಾಶ್ ರೈ

Update: 2019-03-08 14:40 GMT

ಬೆಂಗಳೂರು, ಮಾ.8: ಹೆಣ್ಣಿನ ದೃಷ್ಟಿಯಿಂದ ಗ್ರಹಿಸದೆ ಕೈಗೊಳ್ಳವ ಯಾವುದೆ ಯೋಜನೆಗಳು, ಕಾರ್ಯಕ್ರಮಗಳು ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಿಲ್ಲವೆಂದು ಬಹುಭಾಷಾ ನಟ ಪ್ರಕಾಶ್ ರೈ ಅಭಿಪ್ರಾಯಿಸಿದರು.

ಶುಕ್ರವಾರ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನಗರದ ಅಲುಮ್ನಿ ಅಸೋಸಿಯೇಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೆ ಹೆಣ್ಣನ್ನು ಅಡುಗೆ ಮನೆಗೆ ಸೀಮಿತಗೊಳಿಸುವಂತಹ ವಾತಾವರಣ ನಿರ್ಮಿಸಲಾಗಿದೆ. ನಮ್ಮ ಆಟ-ಪಾಠಗಳು ಕೂಡ ಹೆಣ್ಣನ್ನು ಚೌಕಟ್ಟಿನಲ್ಲಿ ಬಂಧಿಸಿಡುವಂತಹ ಸ್ವರೂಪದ್ದೆ ಆಗಿವೆ. ಇವೆಲ್ಲವುಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಮೂಲಕ ಹೆಣ್ಣು-ಗಂಡುಗಳು ಸಮಾನರೆಂಬ ಭಾವನೆಯನ್ನು ಬಿತ್ತುವಂತಹ ಕಾರ್ಯಯೋಜನೆಗಳು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಹೆಣ್ಣಿನ್ನು ಸಮಾನತೆಯಿಂದ ಕಾಣುವುದು, ಹೆಣ್ಣಿಗೆ ಗಂಡಿನಷ್ಟೆ ಆಸ್ತಿ ಹಕ್ಕು, ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಕೇವಲ ಹೆಣ್ಣಿಗೆ ನಾವು ಕೊಟ್ಟಿರುವ ಸ್ವಾತಂತ್ರವಲ್ಲ. ಗಂಡು, ಹೆಣ್ಣಿನ ಮಧ್ಯೆ ಸಮಾನತೆ ಇಲ್ಲದಿರುವ ಸಮಾಜ ಅಂಗವಿಲಕತೆಯ ಲಕ್ಷಣವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.

ರಾಜಕೀಯ ಕ್ಷೇತ್ರದಲ್ಲೂ ಮಹಿಳೆ ಸಮಾನ ಸ್ಥಾನಗಳನ್ನು ಪಡೆಯುವಂತಾಗಬೇಕು. ವಿಧಾನಸೌಧ ಹಾಗೂ ಸಂಸತ್‌ನಲ್ಲಿ ಶೇ.50ರಷ್ಟು ಮಹಿಳೆಯರು ಶಾಸಕಿ, ಸಂಸದರಾಗಿ ಆಯ್ಕೆಯಾಗುವಂತಹ ಅವಕಾಶವನ್ನು ದೊರಕಿಸಿಕೊಡುವಂತಹದ್ದು ಪ್ರಜ್ಞಾವಂತ ಸಮಾಜದ ಲಕ್ಷಣವಾಗಿದೆ. ಈ ನಿಟ್ಟಿನಲ್ಲಿ ಪುರುಷರು ಮಹಿಳೆಯರ ಸಮಾನ ಅವಕಾಶಗಳನ್ನು ಕೊಡುವುದರ ಕಡೆಗೆ ಚಿಂತಿಸಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.

ಎಸ್‌ಯುಸಿಐನ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ದೇವರ ಹೆಸರಿನಲ್ಲಿ ಶೋಷಣೆ ಮಾಡಿದ್ದು ಇನ್ನಾದರು ನಿಲ್ಲಿಸಬೇಕು. ಮಹಿಳೆಯರನ್ನು ತಮ್ಮಂತೆ ಮನುಷ್ಯರೆಂದು ಭಾವಿಸಿ ಪ್ರಜಾಪ್ರಭುತ್ವದಡಿ ಘನತೆಯಿಂದ ನಡೆಸಿಕೊಂಡರೆ ಸಾಕು ಎಂದು ತಿಳಿಸಿದರು.

ಇಂದಿನ ಆಧುನಿಕ ಯುಗದಲ್ಲೂ ಪುರುಷ ಪ್ರಧಾನ ವ್ಯವಸ್ಥೆ ಮಹಿಳಾ ಶೋಷಣಾ ವಿಧಾನಗಳು ಬೇರೆ, ಬೇರೆ ಸ್ವರೂಪಗಳಲ್ಲಿ ಮಹಿಳೆಯನ್ನು ಶೋಷಿಸುತ್ತಾ ಬರುತ್ತಿದೆ. ಇದನ್ನು ನಿರ್ಮೂಲನೆ ಮಾಡಲು ಸೂಕ್ತ ಕಾನೂನುಗಳನ್ನು ರೂಪಿಸಬೇಕಾದ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರ ಶೋಷಣೆಯ ವಿಧಾನಗಳನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭಾ, ಎಐಯುಟಿಯುಸಿ ಬೆಂಗಳೂರು ಉಪಾಧ್ಯಕ್ಷೆ ರಮಾ, ಜಿಲ್ಲಾಧ್ಯಕ್ಷೆ ಹೇಮಾವತಿ, ಜಿಲ್ಲಾ ಕಾರ್ಯದರ್ಶಿ ಶಾಂತಾ ಮತ್ತಿತರರಿದ್ದರು.

ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ದೊಡ್ಡ ಮಟ್ಟದ ಚಳುವಳಿ ನಡೆಯುತ್ತಿದೆ. ಇದರ ಅಗತ್ಯ ಮಹಿಳಾ ಸಮುದಾಯಕ್ಕೆ ಇಲ್ಲ. ದೇವರ, ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಪರಿಪರಿಯಾಗಿ ಶೋಷಿಸುತ್ತಾ ಬರಲಾಗಿದೆ. ಈಗ ಪುನಃ ಸಮಾನತೆಯ ಹೆಸರಿನಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶ ಕುರಿತಂತೆ ಚಳವಳಿ ಆರಂಭಿಸಿರುವುದು ದುರಂತ. ಇಂತಹ ವಿಷಯಗಳು ಪ್ರಗತಿಪರ ಚಳವಳಿಗೆ ಅಗತ್ಯವಿಲ್ಲ.

-ಕೆ.ಉಮಾ, ಎಸ್‌ಯುಸಿಐ, ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News