ರೌಡಿ ಲಕ್ಷ್ಮಣ ಹತ್ಯೆ ಪ್ರಕರಣ: ಕ್ಯಾಟ್ ರಾಜ ಕಾಲಿಗೆ ಗುಂಡು

Update: 2019-03-09 15:03 GMT

ಬೆಂಗಳೂರು, ಮಾ.9: ರೌಡಿ ಲಕ್ಷ್ಮಣ ಹತ್ಯೆ ಪ್ರಕರಣ ಸಂಬಂಧ ರೌಡಿ ರಾಜ ಯಾನೆ ಕ್ಯಾಟ್ ರಾಜನ ಕಾಲಿಗೆ ಪಿಸ್ತೂಲಿನಿಂದ ಗುಂಡಿಕ್ಕಿ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೊಲೆ, ಸುಲಿಗೆ, ದರೋಡೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಾಪರೆಡ್ಡಿಪಾಳ್ಯದ ನಿವಾಸಿ ಕ್ಯಾಟ್ ರಾಜ, ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಹೇಳಿದ್ದಾರೆ.

ಪ್ರಕರಣದ ವಿವರ: ರೌಡಿ ಲಕ್ಷ್ಮಣ ಹತ್ಯೆ ಪ್ರಕರಣ ಸಂಬಂಧ ನಾಲ್ಕು ವಿಶೇಷ ಪೊಲೀಸ್ ತಂಡಗಳು ಕೃತ್ಯವೆಸಗಿದ ಆರೋಪಿಗಳ ಬಂಧನಕ್ಕೆ ತನಿಖೆ ನಡೆಸಿದ್ದವು. ಹತ್ಯೆ ಪ್ರಕರಣದಲ್ಲಿ ಸುಪಾರಿ ಕಿಲ್ಲರ್ ಕ್ಯಾಟ್ ರಾಜನ ಕೈವಾಡವಿದೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿದ ಒಂದು ತಂಡ ಶುಕ್ರವಾರ ರಾತ್ರಿ ಗುಡಿ ಬಂಡೆಯಲ್ಲಿರುವ ತಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಕ್ಯಾಟ್ ರಾಜ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ವಶಕ್ಕೆ ಪಡೆದು ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿತ್ತು.

ವಿಚಾರಣೆಗೊಳಪಡಿಸಿದಾಗ ಆತ ಕೊಲೆಗೆ ಬಳಸಿದ್ದ ಮಾರಕಾಸ್ತ್ರ ಮತ್ತು ಬಟ್ಟೆಗಳನ್ನು ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿ ಸಮೀಪದ ಕರೀಂಸಾಬ್ ಬಡಾವಣೆಯಲ್ಲಿರುವ ದೊಡ್ಡಣ್ಣ ಎಸ್ಟೇಟ್‌ನಲ್ಲಿಟ್ಟಿರುವುದಾಗಿ ತಿಳಿಸಿದ್ದ. ಹೀಗಾಗಿ, ಶನಿವಾರ ಮಧ್ಯಾಹ್ನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಂತ್ ಮತ್ತು ಅವರ ಸಿಬ್ಬಂದಿ ಬಡಾವಣೆಗೆ ಕರೆದೊಯ್ದಿದ್ದರು.

ಆ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾರಕಾಸ್ತ್ರ ಹಾಗೂ ಬಟ್ಟೆಗಳನ್ನು ಹುಡುಕುವ ನೆಪದಲ್ಲಿ ಮುಖ್ಯಪೇದೆ ಚೌಡೇಗೌಡ ಮತ್ತು ಪೇದೆ ಆನಂದ್ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಎನ್ನಲಾಗಿದೆ.

ತಕ್ಷಣ ಎಚ್ಚೆತ್ತ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ಪರಾರಿಯಾಗುತ್ತಿದ್ದ ಕ್ಯಾಟ್ ರಾಜನಿಗೆ ಶರಣಾಗುವಂತೆ ಸೂಚನೆ ನೀಡಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರೂ, ಕಲ್ಲಿನ ದಾಳಿ ಮುಂದುವರಿಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಗುಂಡು ಹಾರಿಸಿ ಬಂಧಿಸಿದ್ದಾರೆ.

ಆರೋಪಿಯ ಕಲ್ಲೇಟಿನಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News