ಆ್ಯಪ್ ಆಧಾರಿತ ಟ್ಯಾಕ್ಸಿಗಳಿಂದ ಆಟೊ ಚಾಲಕರ ಹೊಟ್ಟೆಗೆ ಹೊಡೆತ: ಮೀನಾಕ್ಷಿ ಸುಂದರಂ

Update: 2019-03-09 17:40 GMT

ಬೆಂಗಳೂರು, ಮಾ.9: ಆ್ಯಪ್ ಆಧಾರಿತ ಟ್ಯಾಕ್ಸಿಗಳಿಂದ ಆಟೊ ಚಾಲಕರ ಹೊಟ್ಟೆಗೆ ಹೊಡೆತ ಬೀಳುತ್ತಿದೆ ಎಂದು ಆಟೊರಿಕ್ಷಾ ಡ್ರೈವರ್ಸ್‌ ಯೂನಿಯನ್ (ಸಿಐಟಿಯು) ಅಧ್ಯಕ್ಷ ಮೀನಾಕ್ಷಿ ಸುಂದರಂ ದೂರಿದರು.

ಶನಿವಾರ ನಗರದ ಮಲ್ಲೇಶ್ವರಂನ ಆರ್.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ಒಕ್ಕೂಟದಿಂದ ಆಯೋಜಿಸಿದ್ದ ‘40 ನೇ ವರ್ಷದ ಸರ್ವ ಸದಸ್ಯರ ಸಭೆ ಹಾಗೂ 4 ನೇ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

ಕಾರು ತಯಾರಿಕಾ ಕಂಪನಿಗಳು ಮಾರುಕಟ್ಟೆ ಸೃಷ್ಟಿಗಾಗಿ ಓಲಾ, ಉಬರ್ ಮೊದಲಾದ ಟ್ಯಾಕ್ಸಿ ಕಂಪನಿಗಳನ್ನು ಬಳಸಿಕೊಳ್ಳುತ್ತಿವೆ. ಇದರಿಂದಾಗಿ ಆಟೊರಿಕ್ಷಾ ಚಾಲಕರ ಬದುಕಿಗೆ ಹೊಡೆತ ಬೀಳುತ್ತಿದೆ. ಅಷ್ಟೇ ಅಲ್ಲದೆ, ಓಲಾ, ಉಬರ್ ಮೊದಲಾದ ಟ್ಯಾಕ್ಸಿ ಕಂಪೆನಿಗಳ ಮಾಲಕರನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಇವುಗಳ ನಿಜವಾದ ಮಾಲಕರು ಕಾರು ಉತ್ಪಾದನಾ ಕಂಪೆನಿಗಳ ಮಾಲಕರೇ ಆಗಿರುತ್ತಾರೆ ಎಂದರು.

ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ವೇಗವಾಗಿ ಕಾರು ತಯಾರಾಗುತ್ತಿದೆ. ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆಯಾದಾಗ ನಷ್ಟ ಹೊಂದಬೇಕಾಗುತ್ತದೆ. ಈ ನಷ್ಟದಿಂದ ತಪ್ಪಿಸಿಕೊಳ್ಳಲು ಕಂಪೆನಿಗಳು ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳನ್ನು ಹುಟ್ಟುಹಾಕುತ್ತಿವೆ. ನಿರುದ್ಯೋಗಿ ಯುವಕರು ಕೆಲಸ ಸಿಗದಿದ್ದಾಗ ಕೊನೆಗೆ ಟ್ಯಾಕ್ಸಿ ಖರೀದಿಸಿ ಚಾಲಕ ವೃತ್ತಿಗೆ ಬರುತ್ತಾರೆ. ಇದು ಆಟೊ ಚಾಲಕರ ಬದುಕಿಗೆ ದೊಡ್ಡ ಆಘಾತವಾಗಿದೆ. ಈ ಎಲ್ಲ ಸಮಸ್ಯೆಗಳು ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ಅವರು ವಿವರಿಸಿದರು.

ಆಟೊರಿಕ್ಷಾ ಒಂದೇ ಕಂಪೆನಿಯಿಂದ ತಯಾರಾದ ಉತ್ಪನ್ನವಾಗಿದೆ. ಆದರೆ, ಕಾರುಗಳು ನಾನಾ ಕಂಪೆನಿಗಳು, ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಸಾಮಾನ್ಯ ಗ್ರಾಹಕರ ಬಳಿ ಈಗಾಗಲೇ ಕಾರು ಇರುವುದರಿಂದ ಖರೀದಿ ಪ್ರಮಾಣ ಕಡಿಮೆಯಾಗಿದೆ. ಕಾರು ಉತ್ಪಾದಿಸುವ ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ ಎಂದು ಅವರು ತಿಳಿಸಿದರು.

ಅಗತ್ಯ ವಸ್ತುಗಳ ದರ ಏರಿಕೆ ಹಾಗೂ ಕಡಿಮೆ ವೇತನ ಕೂಡಾ ಆಟೊರಿಕ್ಷಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕಾರಣ. ಬೆಲೆ ಏರಿಕೆ ಹಾಗೂ ಕಡಿಮೆ ವೇತನದಿಂದಾಗಿ ಜನರು ಆಟೊರಿಕ್ಷಾ ಬಳಸುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ನಿಗಮಗಳ ಎಸಿ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ತಿಳಿಸಿದರು.

ಸಾರಿಗೆ ಅಧಿಕಾರಿಗಳ ದೌರ್ಜನ್ಯ, ಪದೇ ಪದೇ ದಂಡ ವಿಧಿಸುವ ಕಿರುಕುಳವನ್ನು ಚಾಲಕರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ದೌರ್ಜನ್ಯದ ವಿರುದ್ಧವೂ ಹೋರಾಟ ನಡೆಯಬೇಕಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ರಾಜಶೇಖರ ಮೂರ್ತಿ, ಉಪಾಧ್ಯಕ್ಷ ನವೀನ್ ಶೆಣೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News