ಮುಸ್ಲಿಮರನ್ನು ಶತ್ರುವಿನಂತೆ ಬಿಂಬಿಸುವುದು ಮುಠ್ಠಾಳತನ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ವೆಂಕಟಾಚಲಯ್ಯ

Update: 2019-03-10 16:24 GMT

ಬೆಂಗಳೂರು, ಮಾ.10: ಸಮಾಜದೊಳಗೆ ಯಾವುದೇ ವಿಷಯಗಳಿಗೆ ಸಂಘರ್ಷ ಉಂಟಾಗಿದೆ ಎಂಬ ನೆಪದ ಮೇಲೆ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಕೊಂಡು ದೇಶದ ಶತ್ರುವಿನಂತೆ ಬಿಂಬಿಸುವುದು ಮುಠ್ಠಾಳತನ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ರವಿವಾರ ನಗರದ ಎನ್‌ಆರ್ ಕಾಲೋನಿಯ ಪಾವಗಡದ ರಾಮಕೃಷ್ಣ ಸೇವಾಶ್ರಮ ಹಾಗೂ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಹಯೋಗ ದೊಂದಿಗೆ ಏರ್ಪಡಿಸಿದ್ದ, ಪೇಜಾವರ ಮಠದ ವಿಶ್ವೇಶ ತೀರ್ಥರ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಂಝಾನ್ ಉಪವಾಸ ಮಾಸದಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿದ್ದರು. ಆದರೆ, ಕೆಲವರು ಇದೇ ವಿಚಾರವಾಗಿ ಪೇಜಾವರ ಶ್ರೀಗಳನ್ನು ಟೀಕಿಸಿದರು ಎಂದ ಅವರು, ಶ್ರೀಗಳ ಮನಸ್ಸು ಸೌಹಾರ್ದಕ್ಕಾಗಿ ದುಡಿದಿದೆ. ಆದರೆ, ಕೆಲವರನ್ನು ಅವರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದು ನುಡಿದರು.

ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ದೇವರ ಸೇವೆಯ ಜತೆಗೆ ದೀನರ ಸೇವೆಯನ್ನೂ ಮಾಡಬೇಕು. ಇಲ್ಲದಿದ್ದರೆ ಮುಕ್ತಿಗೆ ವೀಸಾ ಸಿಗುವುದಿಲ್ಲ. ಪ್ರತಿಮೆಯಲ್ಲಿ ದೇವರನ್ನು ಕಾಣುವವನು ಕೆಳಹಂತದ ಭಕ್ತ. ಸಮಾಜ ಮತ್ತು ಪ್ರಕೃತಿಯ ಅಂಶಗಳಲ್ಲಿ ದೇವರನ್ನು ಹುಡುಕುವವನು ನಿಜ ಭಕ್ತ ಎಂದು ಅಭಿಪ್ರಾಯಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ಪೇಜಾವರ ಶ್ರೀ, ಚಿಕ್ಕವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ, ಉತ್ತಮ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲ ಸಮುದಾಯಗಳ ಸಮಾನತೆಯನ್ನು ಸಾರುವಂತಹ ದಿಟ್ಟತನದ ನಿರ್ಧಾರ ಕೈಗೊಂಡರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News