ಚುನಾವಣೆ ನೀತಿ ಸಂಹಿತೆ: ಆಡಳಿತದ ಶಕ್ತಿಕೇಂದ್ರ ಖಾಲಿ ಖಾಲಿ..!

Update: 2019-03-11 17:07 GMT

ಬೆಂಗಳೂರು, ಮಾ. 11: ಸದಾ ಜನ ಜಂಗುಳಿಯಿಂದ ತುಂಬಿರುತ್ತಿದ್ದ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂಎಸ್ ಬಿಲ್ಡಿಂಗ್) ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಖಾಲಿ-ಖಾಲಿಯಾಗಿದೆ.

ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಮುಖಂಡರು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಚುನಾವಣೆಯತ್ತ ತಮ್ಮ ಗಮನಹರಿಸಿದ್ದಾರೆ. ಹೀಗಾಗಿ ಆಡಳಿತದ ಶಕ್ತಿಕೇಂದ್ರ ಬಣಗುಡುತ್ತಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಮರುದಿನವೇ ಶಕ್ತಿಸೌಧಗಳಿಗೆ ಬರುವ ಸಾರ್ವಜನಿಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ವಿಧಾನಸೌಧ-ವಿಕಾಸಸೌಧದ ಕಾರಿಡಾರ್‌ನಲ್ಲಿ ತುಂಬಿರುತ್ತಿದ್ದ ಜನರ ಸಂಖ್ಯೆ ಇಂದು ವಿರಳವಾಗಿತ್ತು. ಒಂದರ್ಥದಲ್ಲಿ ಬಿಕೋ ಎನ್ನುತ್ತಿದ್ದವು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಮ್ಮ ಕೆಲಸ-ಕಾರ್ಯಗಳು ಆಗುವುದಿಲ್ಲ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ. ಚುನಾವಣೆ ಮುಗಿಯುವವರೆಗೂ ತಮ್ಮ ಯಾವುದೇ ಕೆಲಸ ಆಗುವುದಿಲ್ಲ ಎಂದು ಭಾವಿಸಿರುವ ಜನರು ಸರಕಾರದ ಕಚೇರಿಗಳಿಗೆ ಬರುವುದನ್ನೆ ಕಡಿಮೆ ಮಾಡಿದ್ದಾರೆ. ಬಹುತೇಕ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಸದಾ ಜನಸಾಮಾನ್ಯರಿಂದ ತುಂಬಿ ತುಳುಕುತ್ತಿದ್ದ ರಾಜ್ಯದ ಆಡಳಿತದ ಶಕ್ತಿಕೇಂದ್ರ ಖಾಲಿಯಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ, ಕೆಲ ಅಧಿಕಾರಿಗಳಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News