ಮಾಜಿ ಸಚಿವ ವೈಜನಾಥ ಪಾಟೀಲ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ

Update: 2019-03-12 13:29 GMT

ಬೆಂಗಳೂರು, ಮಾ.12: ಹೈದಾರಾಬಾದ್ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ರೆಸ್ ಸರಕಾರ ನಿರ್ಲಕ್ಷ ತಾಳಿರುವುದನ್ನು ಕಂಡು ಬೇಸತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಾ.8ರಂದು ರಾಜೀನಾಮೆ ನೀಡಿರುವುದಾಗಿ ಮಾಜಿ ಸಚಿವ ವೈಜನಾಥ ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಆರ್ಥಿಕ, ಮತ್ತು ಸಾಮಾಜಿಕವಾಗಿ ಹಿಂದುಳಿದ ಹೈದಾರಾಬಾದ್ ಕರ್ನಾಟಕವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಕಳೆದ ಐದು ವರ್ಷಗಳ ಹಿಂದೆ ಸಂವಿಧಾನದ 371 ನೇ ಕಾಲಂನನ್ನು ತಿದ್ದುಪಡಿ ಮಾಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಘೋಷಿಸಲಾಗಿತ್ತು. ಈ ಕಾಲಂ ತಿದ್ದುಪಡಿ ಪ್ರಕಾರ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸರಕಾರದ ಎಲ್ಲ ನೇಮಕಾತಿಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ತಿಳಿಸಲಾಗಿದೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಭಾಗದ ಪ್ರತಿಯೊಂದು ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡದೇ ನಿರ್ಲಕ್ಷ್ಯ ತಾಳುವುದರ ಜೊತೆಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಈ ಭಾಗಕ್ಕೆ ಪ್ರಕಟಿಸದೇ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದವರು ಪ್ರಮುಖ ಪಾತ್ರವಹಿಸಿದರೂ ಹೈದರಾಬಾದ್-ಕರ್ನಾಟಕವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿದೆ. ಇದ್ದರಿಂದ ಉದ್ಯೋಗದಲ್ಲಿ ಸರಿಯಾದ ಮೀಸಲಾತಿ ದೊರೆಯದೇ ಈ ಭಾಗದ ಯುವ ಜನತೆ ತೊಂದರೆ ಅನುಭವಿಸವಂತಾಗುತ್ತಿದೆ. ಈ ಸಂಬಂಧ ಅನೇಕ ಪ್ರತಿಭಟನೆಗಳನ್ನು ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಕಂಡು ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ಆ ಭಾಗದ ಅಬಿವೃದ್ಧಿಗಾಗಿ ಕೋಟ್ಯಂತರ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗೆಂದು ಹೆಸರಿಗೆ ಮಾತ್ರ ಘೋಷಣೆಯಾಗುತ್ತಿದೆಯೇ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರಿಯಾದ ಮೀಸಲಾತಿ ಸಿಗದೆ ಈ ಭಾಗದ ಯುವಕರು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News