ಬಿಜೆಪಿಯಿಂದ ಯಾರಿಗೆಲ್ಲಾ ಟಿಕೆಟ್?: ಯಡಿಯೂರಪ್ಪ ಹೇಳಿದ್ದು ಹೀಗೆ...

Update: 2019-03-13 13:43 GMT

ಬೆಂಗಳೂರು, ಮಾ. 13: ಬಿಜೆಪಿ ಕೋರ್ ಕಮಿಟಿ ಸಭೆ ಮಾ.15ಕ್ಕೆ ನಡೆಯಲಿದ್ದು, ಮಾ.16ಕ್ಕೆ ದಿಲ್ಲಿಗೆ ಹೋಗಿ ವರಿಷ್ಠರ ಸಮ್ಮತಿ ಬಳಿಕ ಅದೇ ದಿನ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ. 20ರಿಂದ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, 16 ಮಂದಿ ಹಾಲಿ ಸಂಸದರೆಲ್ಲರಿಗೂ ಟಿಕೆಟ್ ನೀಡುವುದು ಖಚಿತ ಎಂದು ಸ್ಪಷ್ಟನೆ ನೀಡಿದರು.

ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರಿಗೂ ಟಿಕೆಟ್ ಖಚಿತ ಎಂದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸಲಿದ್ದು, ಕಲಬುರಗಿ ಕ್ಷೇತ್ರದಿಂದ ಡಾ.ಉಮೇಶ್ ಜಾಧವ್ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮೋದಿ ನಮಗೆ ಶ್ರೀರಕ್ಷೆ: ಮೋದಿ ನೇತೃತ್ವದ ಸರಕಾರದ ಐದು ವರ್ಷಗಳ ಸಾಧನೆ ನಮಗೆ ಶ್ರೀರಕ್ಷೆ ಎಂದ ಅವರು, ಜಮ್ಮು-ಕಾಶ್ಮೀರದ ಪುಲ್ವಾಮಾ ಘಟನೆ ಬಳಿಕ ಭಾರತವನ್ನು ಜಗತ್ತಿನ ಹಲವು ರಾಷ್ಟ್ರಗಳು ಬೆಂಬಲಿಸಿವೆ. ಪಾಕಿಸ್ತಾನವನ್ನು ಎಲ್ಲ ದೇಶಗಳು ಖಂಡಿಸಿವೆ. ಅಲ್ಲದೆ ಭಾರತದ ನಿಲುವಿಗೆ ಬೆಂಬಲ ಕೊಟ್ಟಿವೆ. ಇದು ಒಂದು ರೀತಿಯಲ್ಲಿ ಮೋದಿಯವರಿಗೆ ರಾಜತಾಂತ್ರಿಕ ಗೆಲುವು ಎಂದು ಹೇಳಿದರು.

ಸುಳ್ಳು: ರೈತರ ಸಾಲಮನ್ನಾ ಬಗ್ಗೆ ಸರಕಾರ ಸುಳ್ಳು ಹೇಳುತ್ತಿದ್ದು, ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಈವರೆಗೆ 4,500 ಕೋಟಿ ರೂ.ಗಳಷ್ಟೇ ರೈತರ ಸಾಲಮನ್ನಾ ಆಗಿದೆ. ಸಾಲಮನ್ನಾ ಭರವಸೆ ನೀಡದಿದ್ದರೆ ಜೆಡಿಎಸ್ 20 ಸೀಟುಗಳನ್ನು ಗೆಲ್ಲುತ್ತಿರಲಿಲ್ಲ ಎಂದು ಟೀಕಿಸಿದರು.

ಮಹಾದಾಯಿ ವಿಚಾರವನ್ನ ಪ್ರಣಾಳಿಕೆಯಲ್ಲಿ ಸೇರಿಸಲಿದ್ದು, ಈ ವಿಚಾರದಲ್ಲಿ ರಾಜ್ಯ ಸರಕಾರದ ಜವಾಬ್ದಾರಿ ಬಹಳ ಮುಖ್ಯ. ಆದರೆ, ಮಹಾದಾಯಿ ಕುಡಿಯುವ ನೀರಿನ ವಿಚಾರವನ್ನು ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಅವರು ದೂರಿದರು.

‘ಇದೀಗ ನಮ್ಮ ಗಮನವೇನಿದ್ದರೂ ಲೋಕಸಭೆ ಚುನಾವಣೆ ಮೇಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್‌ನ 20 ಮಂದಿ ಶಾಸಕರು ಅಸಮಾಧಾನ ಹೊಂದಿದ್ದು, ಲೋಕಸಭೆ ಚುನಾವಣೆ ಬಳಿಕ ಏನಾಗುತ್ತೆ ಕಾದುನೋಡಿ’

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News