ಸರಕಾರಿ ಗೌರವದೊಂದಿಗೆ ಮಾತೆ ಮಹಾದೇವಿ ಅಂತ್ಯಕ್ರಿಯೆ: ಸಿಎಂ ಜತೆ ಚರ್ಚಿಸಿ ತೀರ್ಮಾನ- ಎಂ.ಬಿ.ಪಾಟೀಲ್

Update: 2019-03-14 15:32 GMT

ಬೆಂಗಳೂರು, ಮಾ. 14: ಬಸವ ಧರ್ಮ ಪೀಠದ ಅಧ್ಯಕ್ಷ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನೆರವೇರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ಮಾತೆ ಮಹಾದೇವಿ ಲಿಂಗೈಕ್ಯರಾದ ಸುದ್ದಿ ತಿಳಿದು ನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಾತಾಜಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಇಲ್ಲಿನ ರಾಜಾಜಿನಗರದಲ್ಲಿನ ಬಸವ ಮಂಟಪದಲ್ಲಿ ಇಂದು(ಮಾ.14) ರಾತ್ರಿ ಇರಿಸಲಾಗುವುದು. ನಾಳೆ(ಮಾ.15) ಕೂಡಲಸಂಗಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಲ್ಲಿ ಮಠದ ಭಕ್ತಾಧಿಗಳು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಮಾ.16ರ ಶನಿವಾರ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಅನುಸಾರವಾಗಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದರು.

51 ವರ್ಷಗಳ ಕಾಲ ಜಂಗಮ ದಿಕ್ಷೆ ಪಡೆದ ನಂತರ ಬಸವಣ್ಣನವರ ವಚನಗಳು, ಬಸವ ಧರ್ಮವನ್ನ ಮಾತಾಜೀಯವರು ಪಾಲಿಸಿದ್ದಾರೆ. ಎಲ್ಲರಿಗೂ ಪ್ರವಚನ, ಐತಿಹಾಸಿಕ ಸಂಗಮಗಳನ್ನ ಸ್ಥಾಪನೆ ಮಾಡಿದ್ದಾರೆ. ಬಸವಣ್ಣನವರ ವಚನಗಳನ್ನ ಪ್ರಚಾರ ಮಾಡುವ ಮೂಲಕ ಸಾರ್ಥಕ ಬದುಕಿನೊಂದಿಗೆ ಅವರು ಇಲ್ಲಿವರೆಗೆ ಜೀವನ ಕಳೆದಿದ್ದಾರೆಂದು ಪಾಟೀಲ್ ಇದೇವೇಳೆ ಸ್ಮರಿಸಿದರು.

ಬಸವ ಧರ್ಮಕ್ಕೆ ಮಾತೆ ಮಹಾದೇವಿಯರ ಅವರ ಕೊಡುಗೆ ದೊಡ್ಡದು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಮಾತಾಜೀಯವರಿಗೆ ದೊಡ್ಡ ಭಕ್ತ ಗಣವಿದೆ. ಅವರು ಲಿಂಗೈಕ್ಯರಾಗಿರುವುದು ಬಸವ ಭಕ್ತರಿಗೆ ಅಪಾರ ನೋವನ್ನು ಉಂಟು ಮಾಡಿದೆ ಎಂದು ಪಾಟೀಲ್ ಕಂಬನಿ ಮಿಡಿದರು.

ರಾಜಾಜಿನಗರದ ಬಸವ ಮಂಟಪ ಹಾಗೂ ಮಾತೆ ಮಹಾದೇವಿಯವರ ಅಂತ್ಯಕ್ರಿಯೆ ನಡೆಯಲಿರುವ ಕೂಡಲ ಸಂಗಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಅಲ್ಲದೆ, ಪಾರ್ಥಿವ ಶರೀರ ರಸ್ತೆ ಮಾರ್ಗದಲ್ಲಿ ಕೊಂಡೊಯ್ಯವ ವೇಳೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News