ದ.ಕ. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳದ ಪ್ಲಾಸ್ಟಿಕ್ ನಿಷೇಧದ ಸ್ವಚ್ಛತಾ ನೀತಿ!
ಮಂಗಳೂರು, ಮಾ.16: ಪ್ಲಾಸ್ಟಿಕ್ ಭಿತ್ತಿಪತ್ರ, ಕ್ಯಾರಿ ಬ್ಯಾಗ್, ತೋರಣ, ಫ್ಲೆಕ್ಸ್, ತಟ್ಟೆ, ಬಾವುಟ, ಲೋಟ, ಚಮಚ, ಕ್ಲಿಂಗ್ ಫಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದ ವಸ್ತುಗಳ ಬಳಕೆಯನ್ನು ರಾಜ್ಯ ಸರಕಾರ ಆದೇಶಿಸಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ಫ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕಾಗಿ ಸ್ವಚ್ಛತಾ ನೀತಿಯೊಂದನ್ನು ಎರಡು ವರ್ಷದ ಹಿಂದೆ ರೂಪಿಸಿದ್ದರೂ ಕೂಡ ಇನ್ನೂ ಅನುಷ್ಠಾನಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಪ್ಲಾಸ್ಟಿಕ್ ನಿಷೇಧಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ, ಉಪಪರಿಸರ ಅಧಿಕಾರಿ ಮತ್ತು ಹಿರಿಯ ಪರಿಸರ ಅಧಿಕಾರಿ, ಕಂದಾಯ ಉಪವಿಭಾಗದ ಎಲ್ಲಾ ಸಹಾಯಕ ಆಯುಕ್ತರು, ತಹಶೀಲ್ದಾರರು, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳು, ತೂಕ ಮಾಪನ ಮತ್ತು ಅಳತೆ ಇಲಾಖೆಯ ನಿಯಂತ್ರಕರು, ಉಪನಿಯಂತ್ರಕರು, ಪ್ರಾದೇಶಿಕ ಅಧಿಕಾರಿಗಳನ್ನು 2016ರಲ್ಲಿ ಸರಕಾರ ಅನುಷ್ಠಾನ ಅಧಿಕಾರಿಗಳನ್ನಾಗಿ ನೇಮಿಸಿತ್ತು. ಬಳಿಕ ಜಿಪಂ ಸಿಇಒ, ಜಿಪಂ ಉಪಕಾರ್ಯದರ್ಶಿ, ತಾಪಂ ಇಒ, ಗ್ರಾಪಂಗಳ ಪಿಡಿಒಗಳನ್ನು ಕೂಡ ಅನುಷ್ಠಾನ ಅಧಿಕಾರಿಗಳು ಎಂದು ಉಲ್ಲೇಖಿಸಿ ಹೊಸ ಆದೇಶ ಹೊರಡಿಸಲಾಗಿತ್ತು. ಅದರಂತೆ ದ.ಕ.ಜಿಪಂನ ಅಂದಿನ ಸಿಇಒ ಡಾ.ಎಂ.ಆರ್.ರವಿ ದ.ಕ.ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲೂ ಕೂಡ ಪ್ಲಾಸ್ಟಿಕ್ ನಿಷೇಧಕ್ಕಾಗಿ ಸ್ವಚ್ಛತಾ ನೀತಿಯೊಂದನ್ನು ರೂಪಿಸಿದ್ದರು. ಆರಂಭದ ಕೆಲವು ತಿಂಗಳು ಯಶಸ್ವಿಯಾಗಿ ನಡೆಯಿತಾದರೂ ಬಳಿಕ ನೆನಗುದಿಗೆ ಬಿತ್ತು. ಇದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಅದರಲ್ಲೂ ಡಾ.ಎಂ.ಆರ್.ರವಿ ವರ್ಗಾವಣೆಗೊಂಡ ಬಳಿಕವಂತೂ ಈ ನೀತಿಯ ಬಗ್ಗೆ ಹೇಳುವವರು-ಕೇಳುವವರು ಇಲ್ಲ ಎಂಬಂತಾಗಿದೆ.
ನಗರ-ಹಳ್ಳಿ ಎನ್ನದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದೆ. ಇನ್ನು ಘನ ತ್ಯಾಜ್ಯವಂತೂ ಜನರ ನೆಮ್ಮದಿಯನ್ನು ಕೆಡಿಸುತ್ತಿವೆ. ಪ್ರಮುಖ ರಸ್ತೆಗಳ ಇಕ್ಕಡೆಗಳಲ್ಲಿ ತ್ಯಾಜ್ಯ ವಸ್ತುಗಳು ರಾಶಿ ಬಿದ್ದಿದ್ದು, ಅವುಗಳ ವಿಲೇವಾರಿಯೇ ಸಮಸ್ಯೆ ಎಂಬಂತಾಗಿದೆ. ಕೆಲವು ಕಡೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಕೂಡ ಸವಾಲಾಗಿ ಪರಿಣಮಿಸಿದೆ. ಕೆಲವು ಖಾಸಗಿ ಸಂಸ್ಥೆಗಳು, ಕಂಪೆನಿಗಳು ಸ್ವಚ್ಛತೆಗಾಗಿ, ತ್ಯಾಜ್ಯ ಮುಕ್ತ ನಗರಕ್ಕಾಗಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿದ್ದರೂ ಕೂಡ ಫಲಿತಾಂಶ ಮಾತ್ರ ಶೂನ್ಯವಾಗಿದೆ.
► ಸಮಿತಿ ರಚನೆ: ಘನ ತ್ಯಾಜ್ಯವನ್ನು ಗ್ರಾಮಾಂತರ ಪ್ರದೇಶದಿಂದಲೇ ನಿರ್ಮೂಲನೆ ಮಾಡಲು ವಾರ್ಡ್‌ವಾರು ಉಪಸಮಿತಿಗಳನ್ನು ರಚಿಸಲು ಅವಕಾಶವೂ ಇದೆ. ವಾರ್ಡ್‌ಗಳ ಪಂಚಾಯತ್ ಸದಸ್ಯರು ಅಧ್ಯಕ್ಷರಾಗಿ, ಅಂಗನವಾಡಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರು ಸದಸ್ಯರಾಗಿ, ಸ್ವ-ಸಹಾಯ ಹಾಗೂ ಸ್ವಯಂ ಸೇವಾ ಸಂಘದ ಸದಸ್ಯರು, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು, ಶಾಲಾ ಶಿಕ್ಷಕರು/ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಸದಸ್ಯರ ಸಹಿತ ಪ್ರತೀ 10 ಮನೆಗಳಿಗೆ ಒಬ್ಬರಂತೆ ಉಪಸಮಿತಿ ಸದಸ್ಯರ ಸಂಖ್ಯೆಯನ್ನು ಸೀಮಿತಗೊಳಿಸಬೇಕಾಗಿದೆ.
► ಜಾಗೃತಿ ಕಾರ್ಯಕ್ರಮ: ಪ್ಲಾಸ್ಟಿಕ್‌ಗಳಿಂದ ಎದುರಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಜಾಗೃತಿ ಕಾರ್ಯಕ್ರಮವನ್ನೂ ಮಾಡಬಹುದಾಗಿದೆ. ಅಂದರೆ, ಮಾಹಿತಿ ಕರಪತ್ರಗಳು, ಬಿತ್ತಿಚಿತ್ರಗಳು, ಜಿಲ್ಲಾ ಮಟ್ಟದ ಸಮಾವೇಶಗಳು, ಬೀದಿ ನಾಟಕ ಪ್ರದರ್ಶನ, ಗೀತೆಗಳ ರಚನೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಬಹುದಾಗಿದೆ.
► ಕಾರ್ಯತಂತ್ರ: ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ವಾರ್ಡ್ ಸಮಿತಿಯ ಸದಸ್ಯರಿಗೆ ಅನುಗುಣವಾಗಿ ಮನೆಗಳನ್ನು ಹಂಚಿಕೊಳ್ಳುವುದು, ಸಮಿತಿಯ ಪ್ರತೀ ಸದಸ್ಯರಿಗೆ ನಿಗದಿಪಡಿಸಿದ 10 ಮನೆಗಳಿಗೆ ನಿರಂತರ ಭೇಟಿ ನೀಡುವುದು, ಹಸಿ ಕಸವನ್ನು ಗೊಬ್ಬರವನ್ನಾಗಿಸಲು, ಒಣಕಸವನ್ನು ಶುಚಿ ಮತ್ತು ಶುಷ್ಕವಾಗಿ ಸಂಗ್ರಹಿಸಿಡಲು ತರಬೇತಿ ನೀಡುವುದು, ಸಾಮಾಜಿಕ/ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಮಾಹಿತಿಯನ್ನು ಒದಗಿಸುವ ಮೂಲಕ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಿಲೇವಾರಿಗೆ ಕಾರ್ಯತಂತ್ರ ರೂಪಿಸಲು ಸ್ವಚ್ಛತಾ ನೀತಿಯ ಮೂಲಕ ಸೂಚಿಸಲಾಗಿದೆ. ಆದರೆ ವರ್ಷ ಉರುಳುತ್ತಲೇ ಇವು ಕಡತಕ್ಕೆ ಸೀಮಿತಗೊಂಡಿವೆ ಎಂಬ ಮಾತು ವ್ಯಕ್ತವಾಗುತ್ತಿವೆ.
► ಎಳನೀರು ಚಿಪ್ಪು-ಕೋಳಿ ಮತ್ತಿತರ ಮಾಂಸದ ತ್ಯಾಜ್ಯ: ನಗರದಲ್ಲಿ ಪ್ರತೀ ದಿನ ಎಳನೀರು ಚಿಪ್ಪು ಮತ್ತು ಕೋಳಿ ಮತ್ತಿತರ ಮಾಂಸದ ತ್ಯಾಜ್ಯದ ರಾಶಿ ಕೂಡ ಹೆಚ್ಚುತ್ತಿವೆ, ಮೂಲವೊಂದರ ಪ್ರಕಾರ ಪ್ರತೀ ದಿನ 20 ಟನ್ ಎಳನೀರು ಚಿಪ್ಪು, 25ಕ್ಕೂ ಅಧಿಕ ಟನ್ ಕೋಳಿ ಮತ್ತಿತರ ಮಾಂಸದ ತ್ಯಾಜ್ಯ ರಾಶಿ ಬೀಳುತ್ತದೆ. ಇವುಗಳ ವಿಲೇವಾರಿ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧದ ಸ್ವಚ್ಛತಾ ನೀತಿಯು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.
ನಗರದಲ್ಲೂ ಹೆಚ್ಚಳ
ಪ್ಲಾಸ್ಟಿಕ್ ಬಳಕೆಯೊಂದಿಗೆ ಘನತ್ಯಾಜ್ಯದ ಪ್ರಮಾಣವು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಬೃಹತ್ ಕಂಪೆನಿಗಳು ಕೊಡುಗೆಯಾಗಿ ನೀಡಿದ ಒಣ ಮತ್ತು ಹಸಿ ತ್ಯಾಜ್ಯದ ಡಬ್ಬಗಳನ್ನು ಪಾಲಿಕೆಯು ನಗರದ ಅಲ್ಲಲ್ಲಿ ಅಳವಡಿಸಿದ್ದರೂ ಕೂಡ ಜನಸಾಮಾನ್ಯರ ಗಮನವನ್ನು ಅದು ಸೆಳೆಯಲೇ ಇಲ್ಲ. ಇನ್ನು ವ್ಯಾಪಾರಿಗಳು ಕೂಡ ದಿನನಿತ್ಯ ಸೃಷ್ಟಿಯಾಗುವ ತ್ಯಾಜ್ಯಗಳ ವಿಲೇವಾರಿಗೆ ಹೆಚ್ಚಿನ ಅಸ್ಥೆ ವಹಿಸುತ್ತಿಲ್ಲ. ಬೀದಿಬದಿ ವ್ಯಾಪಾರಿಗಳ ಸಹಿತ ಬಹುತೇಕ ಎಲ್ಲಾ ವ್ಯಾಪಾರಿಗಳು ಕೂಡ ‘ಘನ ತ್ಯಾಜ್ಯ’ವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಖಾಸಗಿ ಸಂಸ್ಥೆಯೊಂದು ‘ಸ್ವಚ್ಛ ಮಂಗಳೂರು’ ಅಭಿಯಾನದ ಮೂಲಕ ಪ್ರತೀ ವಾರ ನೂರಾರು ಕಾರ್ಯಕರ್ತರ ಸಹಕಾರದಿಂದ ನಗರ ಮತ್ತು ಹೊರವಲಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರೂ ಕೂಡ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯಗಳ ರಾಶಿಯ ಮೇಲೆ ಪರಿಣಾಮ ಬಿದ್ದಂತಿಲ್ಲ.