ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ಮನವಿ: ದಿನೇಶ್ ಗುಂಡೂರಾವ್

Update: 2019-03-17 13:30 GMT

ಬೆಂಗಳೂರು, ಮಾ.17: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಗೆ ನಮ್ಮ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ರವಿವಾರ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನಾಳೆ ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಸಂಬಂಧ ಮತ್ತೊಮ್ಮೆ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದ ಯಾವುದೇ ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕಿಳಿದರೆ, ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ. ರಾಹುಲ್ ಗಾಂಧಿ ರಾಜ್ಯದಿಂದ ಸ್ಪರ್ಧಿಸಲು ಒಪ್ಪಿದರೆ ಅವರಿಗಾಗಿ ಮೂರು-ನಾಲ್ಕು ಕ್ಷೇತ್ರಗಳ ಆಯ್ಕೆಯನ್ನು ಮುಂದಿಡಲಾಗುವುದು ಎಂದು ಅವರು ಹೇಳಿದರು.

ನನ್ನ ಹಾಗೂ ಪರಮೇಶ್ವರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲು ಅವರನ್ನು ಭೇಟಿ ಮಾಡಿದ್ದೇನೆ. ಪರಮೇಶ್ವರ್ ಇಡೀ ರಾಜ್ಯದ ನಾಯಕರು, ಅವರು ಕೇವಲ ತುಮಕೂರಿಗೆ ಮಾತ್ರ ಸೀಮಿತವಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ನಮ್ಮ ಕೈ ತಪ್ಪಿದ್ದಕ್ಕೆ ಬೇಸರವಿದೆ. ಎರಡು ಪಕ್ಷದ ನಾಯಕರು ಕೂತು ತುಮಕೂರು ಲೋಕಸಭಾ ಕ್ಷೇತ್ರದ ಕುರಿತು ಚರ್ಚಿಸುತ್ತೇವೆ. ಅಂತಿಮ ಹಂತದಲ್ಲಿ ಏನಾದರೂ ಬದಲಾವಣೆಗಳು ಆಗಬಹುದು ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.

ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ. ಈ ವಿಚಾರದ ಕುರಿತು ನಾನು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ನಾವೆಲ್ಲರೂ ಪರಮೇಶ್ವರ್ ಜೊತೆ ಇದ್ದೇವೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ಆಪಾದನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಯಾರೊಬ್ಬರೂ ಒಂದೊಂದು ಕ್ಷೇತ್ರಗಳಿಗೆ ಸೀಮಿತವಲ್ಲ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ. ಅದರಂತೆ, ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟಕೊಟ್ಟಿರುವ ಹೈಕಮಾಂಡ್ ಕ್ರಮಕ್ಕೆ ಬೇಸರಗೊಂಡಿರುವ ಪರಮೇಶ್ವರ್ ಮನವೊಲಿಸಲು ದಿನೇಶ್ ಗುಂಡೂರಾವ್ ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು, ತುಮಕೂರು ಸಂಸದ ಮುದ್ದಹನುಮೇಗೌಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವ ಭರಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News