‘5 ವರ್ಷಗಳಲ್ಲಿ ನನ್ನ ಕ್ಷೇತ್ರದಲ್ಲಿ 2 ಲಕ್ಷ ಶೌಚಾಲಯ ನಿರ್ಮಾಣ’ ಎಂದು ಸುಳ್ಳು ಹೇಳಿದ ಸಂಸದೆ ಶೋಭಾ

Update: 2019-03-19 11:54 GMT

ಚಿಕ್ಕಮಗಳೂರು, ಮಾ.19: ‘ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕಳೆದ 5 ವರ್ಷಗಳಲ್ಲಿ 2 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎನ್ನುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಸುಳ್ಳು ಎನ್ನುವುದು  ಸರಕಾರಿ  ಅಂಕಿ ಅಂಶಗಳಿಂದ ಸಾಬೀತಾಗಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ, “ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ 2 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ” ಎಂದಿದ್ದರು.

ವಾಸ್ತವವೇನು?

‘5 ವರ್ಷಗಳ ಅವಧಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ 2 ಲಕ್ಷ ಶೌಚಾಲಯಗಳನ್ನು ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದೆ’ ಎಂದು ಶೋಭಾ ಟ್ವೀಟ್ ಮಾಡಿದ್ದು, ಇದರ ಜೊತೆಗೆ “ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ 2 ಲಕ್ಷ ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಇದರಿಂದಾಗಿ ಅಂದಾಜು 4 ಲಕ್ಷ ಮಹಿಳೆಯರು ತೆರೆದ ಜಾಗಗಳನ್ನೇ ಅವಲಂಬಿಸುವಂತಾಗಿತ್ತು. 70 ವರ್ಷಗಳಲ್ಲಿ ಯಾರೂ ಸ್ಪಂದಿಸಿಲ್ಲ. ಆದರೆ ಈ ಸರಕಾರ ಸ್ಪಂದಿಸಿತು. 2 ಲಕ್ಷ 13 ಸಾವಿರ ಕುಟುಂಬಗಳು ನಮ್ಮ ಕ್ಷೇತ್ರದಲ್ಲಿ ಶೌಚಾಲಯಗಳನ್ನು ಪಡೆಯಿತು. ಧನ್ಯವಾದಗಳು ಮೋದಿಜಿ ಈ ಯೋಜನೆಗಾಗಿ” ಎನ್ನುವ ಪ್ರಚಾರದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಆದರೆ ಸರಕಾರಿ ಅಂಕಿ ಅಂಶಗಳು ಬೇರೆಯದೇ ಕಥೆ ಹೇಳುತ್ತವೆ. 

ಉಡುಪಿ

ಉಡುಪಿ ಜಿಲ್ಲೆ 2017ರಲ್ಲಿ ‘ಬಯಲು ಶೌಚಾಲಯ ಮುಕ್ತ ಜಿಲ್ಲೆ’ ಎಂದು ಘೋಷಣೆಯಾಗಿದ್ದು, ಈ ಜಿಲ್ಲೆಯಲ್ಲಿ 2013ರಿಂದ 2017ರವರೆಗೆ ಕೇವಲ 28,636 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎನ್ನುವುದು ಉಡುಪಿ ಜಿಲ್ಲಾ ಪಂಚಾಯತ್ ನ ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ, ಕ್ರಮವಾಗಿ 7685, 16262 ಮತ್ತು 4689 ಶೌಚಾಲಯಗಳ ಅಗತ್ಯವಿತ್ತು (2012ರ ಸಮೀಕ್ಷೆ ಆಧಾರದಲ್ಲಿ). 2013-14ರಲ್ಲಿ ಕ್ರಮವಾಗಿ 3378, 5611 ಹಾಗು 1680 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. 2014-15ರಲ್ಲಿ 2777, 7393 ಮತ್ತು 1991 ಶೌಚಾಲಯಗಳು ಪೂರ್ಣಗೊಂಡಿತ್ತು. 2015-16ರಲ್ಲಿ 1368, 2953 ಮತ್ತು 775 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. 2016-17ರಲ್ಲಿ 162, 305 ಹಾಗು 243 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಒಟ್ಟಾರೆಯಾಗಿ ಈ ಅವಧಿಯಲ್ಲಿ ನಿರ್ಮಿಸಲಾದ ಶೌಚಾಲಯಗಳ ಸಂಖ್ಯೆ 28,636. (ಬ್ರಹ್ಮಾವರ, ಕಾಪು, ಬೈಂದೂರು ಹಾಗು ಹೆಬ್ರಿ ತಾಲೂಕುಗಳೆಂದು 2018ರ ಜ.1ರಂದು ಘೋಷಿಸಲಾಗಿದೆ)

ಚಿಕ್ಕಮಗಳೂರಿನ ಕಥೆ ಏನು?

ಚಿಕ್ಕಮಗಳೂರು ಜಿಪಂ ಕಚೇರಿಯಿಂದ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 2012ರಿಂದ 2018ರವರೆಗೆ ಒಟ್ಟು 69,418 ಶೌಚಾಲಯಗಳನ್ನು ಮಾತ್ರ ನಿರ್ಮಿಸಲಾಗಿದೆ. ಇಲ್ಲಿ ಗಮನಿಸಬೇಕಾಗಿರುವ ಅಂಶವೆಂದರೆ 2012ರಿಂದ ಎನ್ನುವುದು. ಇದಕ್ಕಾಗಿ ‘ಸ್ವಚ್ಛ ಭಾರತ’ ಅಭಿಯಾನದಡಿಯಲ್ಲಿ 7,192.71 ಲಕ್ಷ ರೂ. ಖರ್ಚು ಮಾಡಲಾಗಿದೆ.

2018ರ ನಂತರ ಬೇಸ್‍ಲೈನ್ ಸರ್ವೇ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 6,615 ಕುಟುಂಬಗಳು ಶೌಚಾಲಯ ಸೌಲಭ್ಯದಿಂದ ಹೊರಗುಳಿದಿವೆ. ಈ ಪೈಕಿ 2018ರಿಂದ 2019ರ ಮಾರ್ಚ್‍ ವರೆಗೆ 493 ಶೌಚಾಲಯಗಳನ್ನು ಮಾತ್ರ ನಿರ್ಮಿಸಲಾಗಿದ್ದು, ಇದಕ್ಕಾಗಿ 7.41 ಲಕ್ಷ ಅನುದಾನವನ್ನು ಬಳಸಲಾಗಿದೆ. ಜಿಲ್ಲೆಯಲ್ಲಿ 6,122 ಶೌಚಾಲಯಗಳನ್ನು ನಿರ್ಮಿಸುವುದು ಇನ್ನೂ ಬಾಕಿ ಇದೆ.

ನಿರ್ಮಲ ಭಾರತ-ಸ್ವಚ್ಛ ಭಾರತ

2012ರಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆ ಜಾರಿಗೆ ಬಂದಿರಲಿಲ್ಲ. ಆಗ ನಿರ್ಮಲ ಭಾರತ ಅಭಿಯಾನ ಯೋಜನೆ ಅಸ್ತಿತ್ವದಲ್ಲಿತ್ತೆಂದು ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದೇ ಯೋಜನೆಗೆ ‘ಸ್ವಚ್ಛ ಭಾರತ ಅಭಿಯಾನ’ ಎಂದು ಹೆಸರು ಬದಲಿಸಲಾಗಿದೆ. ‘ನಿರ್ಮಲ ಭಾರತ ಅಭಿಯಾನ’ ಹಾಗೂ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಬಂದ ಅನುದಾನ ಒಂದೇ ಆಗಿದೆ. ಇದೇ ಅನುದಾನದಲ್ಲಿ 2012ರಿಂದ 2018ರವರೆಗೆ ಜಿಲ್ಲೆಯಲ್ಲಿ ಒಟ್ಟು 69,418 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಜಿಪಂ ಕಚೇರಿ ನೀಡಿರುವ ಅಂಕಿ ಅಂಶಗಳ ದಾಖಲೆಯಿಂದ ತಿಳಿದು ಬಂದಿದೆ.

ಸುಳ್ಳು ಮೊದಲೇನಲ್ಲ!

ಸಂಸದೆ ಶೋಭಾ ಕರಂದ್ಲಾಜೆಯವರು ಈ ರೀತಿ ತಪ್ಪು ಮಾಹಿತಿ ನೀಡುತ್ತಿರುವುದು ಇದು ಮೊದಲೇನಲ್ಲ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದಾಗ ‘ರಾಜ್ಯದಲ್ಲಿ ಹಿಂದೂಗಳು / ಸಂಘ ಪರಿವಾರ ಕಾರ್ಯಕರ್ತರ ಕೊಲೆ ಅವ್ಯಾಹತವಾಗಿ ನಡೆಯುತ್ತಿವೆ’ ಎಂದು ಆರೋಪಿಸಿ ಇವುಗಳ ಎನ್ ಐಎ ತನಿಖೆಗೆ ಆಗ್ರಹಿಸಿ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಪತ್ರವೊಂದನ್ನು ಬರೆದಿದ್ದರು. ಆದರೆ ಶೋಭಾ ನೀಡಿದ್ದ ಪಟ್ಟಿಯಲ್ಲಿದ್ದ ಒಬ್ಬರು ಜೀವಂತವಿದ್ದು, ಉದ್ಯೋಗ ಮಾಡಿಕೊಂಡಿದ್ದರು. ಪಟ್ಟಿಯಲ್ಲಿದ್ದ ಇನ್ನೂ ಕೆಲವರ ಸಾವು ಆತ್ಮಹತ್ಯೆ, ಅಪಘಾತ ಹೀಗೆ ನಾನಾ ಕಾರಣಗಳಿಂದಾಗಿತ್ತು.

ಈ ಘಟನೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದು, ನಂತರ ಸಂಸದೆ ವಿಷಾದ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News