ಬೆಂಗಳೂರು ದಕ್ಷಿಣ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್

Update: 2019-03-24 13:53 GMT

ಬೆಂಗಳೂರು, ಮಾ24: ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಎಐಸಿಸಿ ರವಿವಾರ ಪ್ರಕಟಿಸಿದ್ದು, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ.

ಕರ್ನಾಟಕ 1, ಬಿಹಾರದ 3, ಜಮ್ಮು-ಕಾಶ್ಮೀರದ 1, ತಮಿಳುನಾಡಿನ 1, ಮಹಾರಾಷ್ಟ್ರದ 4 ಸೇರಿ ಒಟ್ಟು 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ರವಿವಾರ ಬಿಡುಗಡೆ ಮಾಡಿದೆ. ಆದರೆ, ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಆಯ್ಕೆ ಮಾಡಿಲ್ಲ.

ನಿನ್ನೆ ರಾಜ್ಯದ 18 ಅಭ್ಯರ್ಥಿಗಳ ಪಟ್ಟಿ ಬಿಡಗಡೆಗೊಳಿಸಿದ್ದ ಕಾಂಗ್ರೆಸ್, ಬಾಕಿ ಇರಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಇಂದು ಅಭ್ಯರ್ಥಿಯನ್ನು ಘೋಷಿಸಿದೆ. ಈ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.

ಈಗಾಗಲೇ ತನ್ನ 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. 1996 ರಿಂದ 6 ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಅನಂತಕುಮಾರ್ ಇತ್ತೀಚೆಗೆ ನಿಧನಹೊಂದಿದ್ದು, ಹೀಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ  ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯನ್ನು ತಡೆ ಹಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಬಾರಿ ವಾರಣಾಸಿಯಿಂದ ಕಣಕ್ಕಿಳಿಯುತ್ತಿರುವ ಮೋದಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದಲೂ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಕಾರಣಕ್ಕಾಗಿ ಅಭ್ಯರ್ಥಿ ಘೋಷಣೆಯನ್ನು ಬಾಕಿ ಇರಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News