ಉಮೇಶ್ ಜಾಧವ್ ರಾಜೀನಾಮೆ ಪ್ರಕರಣ: ‘ಅನರ್ಹತೆ’ ತೀರ್ಪು ಕಾಯ್ದಿರಿಸಿದ ಸ್ಪೀಕರ್ ರಮೇಶ್ ಕುಮಾರ್

Update: 2019-03-25 12:28 GMT
ಉಮೇಶ್ ಜಾಧವ್

ಬೆಂಗಳೂರು, ಮಾ. 25: ಡಾ.ಉಮೇಶ್ ಜಾಧವ್ ಅನರ್ಹತೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಅನರ್ಹತೆ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ನಮ್ಮ ಮುಂದಿದ್ದು, ಅದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಉಮೇಶ್ ಜಾಧವ್ ವಿಚಾರಣೆ ನಡೆಸಿದ ಬಳಿಕ ಮಾತನಾಡಿದ ಅವರು, ಡಾ.ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರ ರಾಜೀನಾಮೆಯನ್ನು ಯಾವಾಗ ಅಂಗೀಕಾರ ಮಾಡಲಿದ್ದೇನೆ ಎಂಬ ಬಗ್ಗೆ ಕಾಲಮಿತಿ ಹಾಕಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ಸಂವಿಧಾನದ 10ನೆ ಪರಿಚ್ಛೇದದ ಅನ್ವಯ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನೂನ್ಯತೆಯಿಂದ ಕೂಡಿದ್ದು, ಅದರ ಬದಲಾವಣೆ ಆಗುವ ಅಗತ್ಯವಿದೆ. ನಾನು ಈಗ ಅನರ್ಹತೆಗೊಳಿಸಿದರೂ, ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದಿಂದ ಉಮೇಶ್ ಜಾಧವ್ ಮತ್ತೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಾಗೂ ಅನರ್ಹತೆ ಎರಡೂ ವಿಚಾರ ನಮ್ಮ ಮುಂದಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ಉಮೇಶ್ ಜಾಧವ್ ಚುನಾವಣೆಗೆ ಸ್ಪರ್ಧೆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಾನೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಉಮೇಶ್ ಜಾಧವ್ ರಾಜೀನಾಮೆ ನೀಡುವ ವೇಳೆ ಮತದಾರರ ಅಭಿಪ್ರಾಯ ಆಲಿಸಿದ್ದಾರೋ ಇಲ್ಲವೋ ಎಂಬುದನ್ನು ಕೇಳಿದ್ದೇನೆ. ಈ ವಿಚಾರಣೆಯಿಂದ ಅನರ್ಹತೆ ವಿಚಾರವಾಗಿ ಸಂವಿಧಾನದ 10ನೆ ಪರಿಚ್ಛೇದದ ಸಮರ್ಪಕವಾಗಿಲ್ಲ, ದೌರ್ಬಲ್ಯಗಳಿಂದ ಕೂಡಿದ್ದು, ಅದಕ್ಕೆ ತಿದ್ದುಪಡಿ ಅಗತ್ಯವಿದೆ ಎಂದು ರಮೇಶ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News