ಆರ್ಚ್ ಬಿಷಪ್‌ ರನ್ನು ಭೇಟಿಯಾದ ಕೃಷ್ಣಭೈರೇಗೌಡ, ರಿಝ್ವಾನ್ ಅರ್ಷದ್, ಬಿ.ಕೆ.ಹರಿಪ್ರಸಾದ್

Update: 2019-03-27 16:46 GMT

ಬೆಂಗಳೂರು, ಮಾ.27: ಬೆಂಗಳೂರಿನ ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೇಗೌಡ, ಕೇಂದ್ರ ಕ್ಷೇತ್ರದ ಅಭ್ಯರ್ಥಿ ರಿಝ್ವಾನ್ ಅರ್ಷದ್ ಹಾಗೂ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಕ್ರೈಸ್ತ ಧರ್ಮಗುರು ಆರ್ಚ್ ಬಿಷಪ್‌ರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು.

ಬುಧವಾರ ಬೆಂಗಳೂರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಬಿಷಷ್ ಹೌಸ್‌ಗೆ ಭೇಟಿ ನೀಡಿ ಕ್ರೈಸ್ತ ಧರ್ಮದ ಗುರು ಆರ್ಚ್ ಬಿಷಪ್‌ರಿಂದ ಆಶೀರ್ವಾದ ಪಡೆದರು. ಈ ವೇಳೆ ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ಶಾಸಕ ಎನ್.ಎ.ಹಾರಿಸ್ ಉಪಸ್ಥಿತರಿದ್ದರು.

ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ 70 ವರ್ಷಗಳಿಂದ ಏನೂ ಮಾಡಿಲ್ಲವೆಂದು ಬಿಜೆಪಿ ಹೇಳುತ್ತಿದೆ. ಈ 70 ವರ್ಷ ಏನು ಸಾಧನೆ ಮಾಡದಿದ್ದರೂ ದೇಶವನ್ನು ಒಂದಾಗಿ ಇಟ್ಟುಕೊಂಡಿದ್ದೇವೆ. ಇದೇ ನಮ್ಮ ದೊಡ್ಡ ಸಾಧನೆ. ಕಾಂಗ್ರೆಸ್ ಎಂದಿಗೂ ವಯಸ್ಸು, ಜಾತಿ, ಧರ್ಮದ ರಾಜಕಾರಣ ಮಾಡುವುದಿಲ್ಲವೆಂದು ತಿಳಿಸಿದರು.

ಈ ನಡುವೆ ಸುದ್ದಿಗಾರರು, ನಿಮ್ಮ ವಿರುದ್ಧ ಪ್ರಕಾಶ್ ರೈ ಸ್ಪರ್ಧೆಗಿಳಿದಿದ್ದಾರೆ, ನಿಮ್ಮ ಅಭಿಪ್ರಾಯವೇನು ಎಂದಾಗ, ನಮ್ಮ ನೇರ ಹಣಾಹಣಿ ಬಿಜೆಪಿ ವಿರುದ್ಧ. ನಾನು ಇನ್ನೂ ಯುವಕನಿದ್ದೇನೆ. ನನಗೆ ಜನ ಮತನೀಡಿ ಸಂಸದನಾಗಿ ಆಯ್ಕೆ ಮಾಡುತ್ತಾರೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಝ್ವಾನ್ ಅರ್ಷದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಇಲ್ಲಿವರೆಗೂ ಎರಡು-ಮೂರು ಬಾರಿ ಗೆದ್ದವರು ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಅವರ ಕೊಡುಗೆ ಕ್ಷೇತ್ರಕ್ಕೆ ಶೂನ್ಯ. ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಸಂಸದರು ಜನರ ಮಧ್ಯ ಕಾಣಿಸಿಕೊಳ್ಳಲಿಲ್ಲ. ಕ್ಷೇತ್ರದ ಜನತೆ ಸಂಸದರು ಎಲ್ಲಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿ ಈ ಬಾರಿ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News