ದೇಶದಲ್ಲಿ ಪ್ರತಿ 3 ನಿಮಿಷಕ್ಕೊಮ್ಮೆ ಕ್ಷಯರೋಗಿ ಮೃತ್ಯು: ಡಾ.ಸಿ.ನಾಗರಾಜು

Update: 2019-03-27 17:20 GMT

ಬೆಂಗಳೂರು, ಮಾ.27: ದೇಶದಲ್ಲಿ ಪ್ರತಿ 3 ನಿಮಿಷಕ್ಕೊಮ್ಮೆ ಒಬ್ಬರು ಕ್ಷಯರೋಗಿಗಳು ಸಾವನ್ನಪ್ಪುತ್ತಿದ್ದು, ಈ ರೋಗಕ್ಕೆ ಸಮರೋಪಾದಿಯಲ್ಲಿ ಚಿಕಿತ್ಸೆ ಕಲ್ಪಿಸಲು ಮುಂದಾಗಬೇಕೆಂದು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಸಿ.ನಾಗರಾಜು ಇಂದಿಲ್ಲಿ ತಿಳಿಸಿದರು.

ಬುಧವಾರ ನಗರದ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯೂ ಹಮ್ಮಿಕೊಂಡಿದ್ದ, ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ, ಜಾಗೃತಿ ಕುರಿತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಕ್ಷಯರೋಗದ ಕುರಿತು, ಅಧಿಕಾರಿ ವರ್ಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಜಾಗೃತಿ ಮೂಡಿಸಬೇಕು. ಈ ಮೂಲಕ ಸದೃಢ ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸಮರೋಪಾದಿಯಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿಲ್ಲಬಾರದು ಎಂದು ನುಡಿದರು. ಒಂದು ಮನೆಯಲ್ಲಿ ಒಬ್ಬರಿಗೆ ಕ್ಷಯ ರೋಗ ಇದ್ದರೆ ಉಳಿದವರಿಗೂ ತಗಲುವ ಸಾಧ್ಯತೆ ಇದ್ದು, ಏನು ತಿಳಿಯದ ಮಕ್ಕಳು ರೋಗ ಪೀಡಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಹಾಗೂ ರೋಗದ ಮನವರಿಕೆ ಅಗತ್ಯ ಎಂದು ಹೇಳಿದರು.

ಯಾವುದೇ ರೀತಿಯಲ್ಲಿಯೂ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸುತ್ತ ಮುತ್ತಲಿನವರಿಗೆ ಈ ಕುರಿತು ಮಾಹಿತಿ ನೀಡಬೇಕು. ಈ ಮೂಲಕ ಕ್ಷಯರೋಗ ತಡೆಗೆ ಯುವಕರು ಸಹಕರಿಸಬೇಕು ಎಂದು ತಿಳಿಸಿದರು.

ಜಾಥಾದಲ್ಲಿ ವೈದ್ಯರಾದ ಡಾ.ರುದ್ರಯ್ಯ, ಹಿರಿಯ ರಂಗಕರ್ಮಿ ಡಾ.ಆಡುಗೋಡಿ ಶ್ರೀನಿವಾಸ್, ಹಿರಿಯ ವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಾಟಕ ಪ್ರದರ್ಶನ

ಹಿರಿಯ ರಂಗಕರ್ಮಿ ಡಾ.ಆಡುಗೋಡಿ ಶ್ರೀನಿವಾಸ್ ಅವರ ನೇತೃತ್ವದ ಕಲಾತಂಡದ ಸದಸ್ಯರು ಕ್ಷಯರೋಗ ನಿರ್ಮೂಲನೆ ಕುರಿತ ಕಿರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.

ಆರೊಗ್ಯ ಸಂರಕ್ಷಣೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ, ಕ್ಷಯರೋಗ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಯುವಜನರು ಮಾಡಬೇಕು

-ಡಾ.ಆಡುಗೋಡಿ ಶ್ರೀನಿವಾಸ್, ರಂಗಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News