ರಾಜಧಾನಿಯ ಬಿಸಿಲಿಗೆ ಪಕ್ಷಿ ಸಂಕುಲ ಅಸ್ವಸ್ಥ

Update: 2019-03-27 17:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.27: ರಾಜಧಾನಿಯಲ್ಲಿ ದಿನೇ ದಿನೆ ಬಿಸಿಲು ಹೆಚ್ಚುತ್ತಿದ್ದು, ಪ್ರಾಣಿ-ಪಕ್ಷಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಕುಡಿಯಲು ನೀರು ಹಾಗೂ ತಿನ್ನಲು ಆಹಾರವಿಲ್ಲದೆ ನೂರಾರು ಪಕ್ಷಿಗಳು ಅಸ್ವಸ್ಥಗೊಂಡು ನಗರದ ಹಲವೆಡೆ ಬೀಳುತ್ತಿವೆ.

ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಿದ್ದು, ಪಕ್ಷಿಗಳಿಗೆ ಬೇಕಾದ ಹಣ್ಣಿನ ಮರಗಳ ಸಂಖ್ಯೆ ವಿರಳ. ಹೀಗಾಗಿ ನಗರದ ಪಕ್ಷಿಗಳು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುವುದು ಅನಿವಾರ್ಯ. ಈ ವೇಳೆ ಬಿಸಿಲ ಝಳದಿಂದ ಪಕ್ಷಿಗಳು ತತ್ತರಿಸಿ, ಅವುಗಳ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಆಗ ವಿಶ್ರಾಂತಿ ಪಡೆಯಲು ಬೇಕಾದ ವಾತಾವರಣವೂ ಇಲ್ಲ. ಕೊನೆಯ ಪಕ್ಷ ನೀರು ಕುಡಿದು ಸ್ವಲ್ಪಸುಧಾರಿಸೋಕೆ ಹತ್ತಿರದಲ್ಲಿ ಕೆರೆ, ಕುಂಟೆಗಳಿಲ್ಲ. ಇದ್ದರೂ ಅದರಲ್ಲಿ ನೀರೂ ಇಲ್ಲ. ಹೀಗಾಗಿ ಪಕ್ಷಿಗಳು ಬೇಸಿಗೆಯಲ್ಲಿಡಿ ಹೈಡ್ರೇಷನ್‌ಗೆ ತುತ್ತಾಗಿ ನಿತ್ರಾಣ ಹೊಂದುತ್ತವೆ.

ಹದ್ದು, ಕಾಗೆ, ಗುಟುರು ಹಕ್ಕಿ (ಬಾರ್ಬೆಟ್), ಮೈನಾ, ಗುಬ್ಬಚ್ಚಿ, ಗೂಬೆ, ಅಳಿಲು, ಕೋತಿ ಮತ್ತಿತರ ಪಕ್ಷಿ-ಪ್ರಾಣಿಗಳನ್ನು ಬೇಸಿಗೆ ಬಾಧಿಸುತ್ತದೆ. ಆದರೆ ಈ ಪೈಕಿ ರಾತ್ರಿ ಸಂಚರಿಸುವ ಗೂಬೆ, ಕಾಡುಪಾಪ ಮತ್ತು ಬಾವಲಿಗಳಿಗೆ ಸೂರ್ಯನ ಪ್ರಭೆ ಅಷ್ಟಾಗಿ ಬಾಧಿಸುವುದಿಲ್ಲ.

ಹಾವುಗಳ ರಕ್ಷಣೆಗೇ ಹೆಚ್ಚು ಕರೆ:

ಪಕ್ಷಿಗಳ ರಕ್ಷಣೆಯ ಕರೆಗಿಂತ ಇದೀಗ ನಗರದಲ್ಲಿ ಉರಗಗಳ ಸಮಸ್ಯೆಯ ಕರೆಗಳು ಈಗಾಗಲೇ ಹೆಚ್ಚಾಗಿವೆ. ಬೇಸಿಗೆಯು ಹಾವುಗಳ ಮಿಲನ ಕಾಲ. ನಗರೀಕರಣದಿಂದಾಗಿ ಅವುಗಳ ಸರಸಕ್ಕೆ ಭಂಗ ಉಂಟಾಗಿರುವುದರಿಂದ ಅವು ಸೀದಾ ಮನೆಯ ಕಾಂಪೌಂಡ್‌ಗೇ ನುಗ್ಗುತ್ತಿವೆ. ಕೆಲವು ಬಾತ್ ರೂಂನಲ್ಲಿ ಅಡಗಿಕೊಂಡರೆ, ಮತ್ತೆ ಕೆಲವು, ಸರ್ಜಾ ಮೇಲೆ, ಚಪ್ಪಲಿ ಗೂಡಿನಲ್ಲಿ, ಇಲ್ಲವೇ ಉದ್ಯಾನದಲ್ಲಿ ಬಂದು ಸೇರಿಕೊಳ್ಳುತ್ತಿವೆ. ಹೀಗಾಗಿ, ನಿತ್ಯ ಏಳೆಂಟು ಕರೆಗಳು ಬರುತ್ತಿವೆ. ಮಾರ್ಚ್ ಏಪ್ರಿಲ್‌ನಲ್ಲಿ ಪ್ರತಿದಿನ ಹಾವುಗಳ ರಕ್ಷಣೆ ಕೋರಿಯೇ 6,070ಕ್ಕೂ ಹೆಚ್ಚು ಕರೆಗಳು ಬೆಂಗಳೂರು ಒಂದರಲ್ಲೇ ಬರುತ್ತವೆ ಎಂದು ಬಿಬಿಎಂಪಿ ಅರಣ್ಯ ಘಟಕದ ವನ್ಯಜೀವಿ ಸಂರಕ್ಷಕ ಎಂ.ರಾಜೇಶ್ ಕುಮಾರ್ ತಿಳಿಸಿದರು.

ಕಾಗೆ ಸಂತತಿ ಶೇ.15ರಷ್ಟು ಕುಸಿತ: ನಗರ ಪ್ರದೇಶದಲ್ಲಿ ಪಾರಿವಾಳಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಕಾಗೆಗಳ ಸಂತತಿ ಶೇ.15ರಷ್ಟು ಕುಸಿದಿದೆ. ಯಾಕೆಂದರೆ, ಪಾರಿವಾಳಗಳಿಗೆ ಗೂಡು ಕಟ್ಟಲು ಕಟ್ಟಡಗಳಿದ್ದರೆ ಸಾಕು. ಆದರೆ ಕಾಗೆಗಳಿಗೆ ಗೂಡು ಕಟ್ಟಲು ಮರಗಳು ಬೇಕು. ಜತೆಗೆ ಹುಲ್ಲು, ಒಣ ಕಡ್ಡಿಯಂತಹ ಸಾಮಗ್ರಿಗಳೂ ಸಿಗುತ್ತಿಲ್ಲ. ಹೀಗಾಗಿ ಕಾಗೆಗಳ ಸಂತತಿ ಕ್ಷೀಣಿಸುತ್ತಿದೆ. ನಗರದ ಬಹುತೇಕ ಅಪಾರ್ಟ್‌ಮೆಂಟ್‌ಗಳು ಪಾರಿವಾಳಗಳ ವಾಸಸ್ಥಾನವಾಗಿದೆ. ಇವು ನಿತ್ಯ 3,040 ಕಿ.ಮೀ.ವರೆಗೆ ಹಾರುವ ಸಾಮರ್ಥ್ಯ ಹೊಂದಿರುವುದರಿಂದ ನೀರು ಆಹಾರ ಹುಡುಕಲು ಇವಕ್ಕೆ ಸಮಸ್ಯೆಯಿಲ್ಲ ಎನ್ನುತ್ತಾರೆ ಪಕ್ಷಿ ತಜ್ಞರು.

ಪಕ್ಷಿಗಳಿಗೆ ಆಹಾರ ಕೊಡಬೇಡಿ:

ಮನೆ ಬಳಿಗೆ ಪಕ್ಷಿಗಳು ಬಂದರೆ ಅವುಗಳಿಗೆ ಒಂದು ಪುಟಾಣಿ ಬಟ್ಟಲಲ್ಲಿ ನೀರಿಡಿ. ಆದರೆ ಆಹಾರ ಕೊಡಬೇಡಿ. ಯಾಕೆಂದರೆ ಒಂದೊಂದು ಪಕ್ಷಿಯ ಆಹಾರವೇ ಬೇರೆ ಬೇರೆಯಿರುತ್ತದೆ. ಬಲವಂತವಾಗಿ ಇವುಗಳಿಗೆ ಆಹಾರ ಕೊಟ್ಟರೆ ಅವುಗಳ ಜೀವಕ್ಕೇ ಆಪತ್ತು ಉಂಟಾಗುತ್ತದೆ ಎನ್ನುತ್ತಾರೆ ವನ್ಯ ಜೀವಿ ಸಂರಕ್ಷಕರು.

ಕೋತಿಗಳಿಗೂ ನೀರು ಕೊಡಿ: ನಗರದಲ್ಲಿ ಕೋತಿಗಳು ಹೆಚ್ಚು ಬಾಧೆಗೊಳಗಾಗುವ ವನ್ಯಜೀವಿಗಳು. ಇವು ಕಟ್ಟಡದಿಂದ ಕಟ್ಟಡಕ್ಕೆ ಬಿಸಿಲನ್ನು ಲೆಕ್ಕಿಸದೆ ಹೆಚ್ಚಾಗಿ ಓಡಾಡುತ್ತವೆ. ಇವುಗಳ ಉದ್ದೇಶವೇ ಆಹಾರ ಹುಡುಕುವುದು. ಸಾಕಷ್ಟು ಸಂದರ್ಭದಲ್ಲಿ ಮನೆಯೊಳಗೂ ನುಗ್ಗಿ ಆಹಾರ ಕದ್ದು ಓಡುವ ಪ್ರಸಂಗಗಳೂ ನಡೆಯುತ್ತವೆ. ಆದರೆ ನೀರಿಗಾಗಿ ಬೇಸಿಗೆಯಲ್ಲಿ ಹೆಚ್ಚು ಹಪಾಹಪಿಸುವ ಪ್ರಾಣಿ ಇದಾಗಿದೆ. ಆದ್ದರಿಂದ ಮನೆಯ ಮುಂದೆ ಪುಟಾಣಿ ಪ್ಲಾಸ್ಟಿಕ್ ಬಟ್ಟಲಲ್ಲಿ ನೀರಿಡಿ. ಪಕ್ಷಿಗಳು ಆಪತ್ತಿನಲ್ಲಿದ್ದರೆ ಮೊ.ಸಂ: 90361 11007 ಅನ್ನು ಸಂಪರ್ಕಿಸಬಹುದು.

ಪ್ರತಿ ಪಕ್ಷಿಯೂ ತನ್ನ ದೇಹ ತೂಕದ ಆಧಾರದ ಮೇಲೆ ಶೇ.20ರಿಂದ 30ರಷ್ಟು ನೀರು, ಆಹಾರ ಬೇಕಾಗುತ್ತದೆ. ಇವುಗಳನ್ನು ಅರಸಿ ಹಾರುತ್ತಾ ಹೊರಟಾಗ ಸೂರ್ಯನ ಶಾಖದಿಂದ ಬಳಲಿ ನಿತ್ರಾಣ ಹೊಂದುತ್ತವೆ. ಹೀಗಾಗಿ ಬೇಸಿಗೆಯಲ್ಲಿ ನಿತ್ಯ ಸುಮಾರು 40ಕ್ಕೂ ಹೆಚ್ಚು ಕರೆಗಳು ಬರುತ್ತವೆ.

-ಎಂ.ರಾಜೇಶ್ ಕುಮಾರ್, ವನ್ಯ ಜೀವಿ ಸಂರಕ್ಷಕರು, ಬಿಬಿಎಂಪಿ, ಅರಣ್ಯ ಘಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News