ಗೆಳತಿಯ ಲೈಂಗಿಕ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ

Update: 2019-03-28 13:35 GMT

ಬೆಂಗಳೂರು, ಮಾ.28: ಡಾ.ಸೋಮ್ ದತ್ತ ನಮಗೆ ಬೇಕಾದ ಸ್ನೇಹಿತರಾಗಿದ್ದು, ಅವರು ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್‌ಅನ್ನು ಅವರೇ ತೆಗೆದಿದ್ದಾರೆ. ಈ ವಿಷಯವನ್ನು ಯಾರೂ ಮುಂದುವರಿಸಬಾರದು ಎಂದು ಹೇಳಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ಇದನ್ನು ನಾನು ಮುಂದುವರಿಸುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೀಟೂ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾರು ಟ್ವೀಟ್ ಮಾಡಿದ್ದರೋ ಅವರೇ ತಮ್ಮ ಖಾತೆಯಿಂದ ಎಲ್ಲ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಹೀಗೆಲ್ಲಾ ಬರೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದುದರಿಂದಾಗಿ ಮಾಧ್ಯಮದವರು ಹಾಗೂ ಬೇರೆ ಯಾರೂ ಇದನ್ನು ಮುಂದುವರಿಸಬಾರದು ಎಂದು ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ನಾನು ರಾಜಕೀಯ ಕ್ಷೇತ್ರಕ್ಕೆ ಹೊಸಬನಾಗಿದ್ದೇನೆ. ಇಲ್ಲಿಗೆ ಬರುವಾಗ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕು. ಇದು ಅಂತಹ ಅಗ್ನಿಪರೀಕ್ಷೆಯ ಒಂದು ಭಾಗವಾಗಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರ ನಡೆದಿದೆ. ಆದರೆ, ಅದನ್ನು ನಾನು ಅವರಿಂದಲೇ ಮುಕ್ತಾಯವಾಗಿಸಿದ್ದೇವೆ. ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡಲೇಬೇಕು ಅಂತ ಹೊರಟವರಿಂದ ಹೀಗೆ ನಡೆದಿದೆ ಎಂದು ಹೇಳಿದ್ದಾರೆ.

ಈಗಷ್ಟೇ ರಾಜಕೀಯಕ್ಕೆ ಬಂದಿರುವ ನಾನು ಇನ್ನೂ ಯುವಕ. ಇಂತಹ ಸಂದರ್ಭದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕಾಗಿಯೇ ಇದನ್ನು ಸೃಷ್ಟಿಸಿದ್ದಾರೆ. ನಮ್ಮ ಮುಖಂಡರಾದ ಮೋದಿ, ಅಮಿತ್ ಶಾರನ್ನು ಜೈಲಿಗಟ್ಟುವ ಪ್ರಯತ್ನಗಳು ನಡೆದಿದ್ದರೂ, ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ನಾನು ಅದೇ ರೀತಿ ಬೆಳೆಯುತ್ತೇನೆ ಎಂಬ ನಂಬಿಕೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News