ವಿದ್ಯಾರ್ಥಿಗಳಿಂದ ಮತದಾನ ಅಭಿಯಾನಕ್ಕೆ ಚಾಲನೆ

Update: 2019-03-29 17:35 GMT

ಬೆಂಗಳೂರು, ಮಾ.29: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಇಲ್ಲಿನ ಆರ್‌ಟಿ ನಗರದ ದಿನ್ನೂರು ಮುಖ್ಯ ರಸ್ತೆಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾಧಿಕಾರಿ(ಎಆರ್‌ಒ) ಡಾ.ಎಂ. ಜಿ.ಶಿವಣ್ಣ ಅವರು ಅಭಿಯಾನಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಮತದಾನ ಕುರಿತು ಪ್ರತಿಜ್ಞೆ ವಿಧಿ ಬೋಧಿಸಿದರು.

ತದನಂತರ ಡಾ.ಎಂ.ಜಿ.ಶಿವಣ್ಣ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರಿಗೆ ಮತದಾನ ಹಕ್ಕು ಚಲಾವಣೆ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಪ್ರತಿಯೊಬ್ಬ ನಾಗರಿಕನಿಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದು, ತಮ್ಮ ಆತ್ಮಾಭಿಮಾನದಿಂದ ಮತ ಚಲಾಯಿಸಿ ಎಂದು ಸಲಹೆ ನೀಡಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಜೀವಾಳವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಈ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದ ಅವರು, 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವುದು ಸರಿಯಲ್ಲ ಎಂದ ಅವರು, ವಿದ್ಯಾವಂತರಿಗೆ ಮತದಾನ ಅರಿವು ಇದ್ದರೂ ಮತದಾನ ಮಾಡುವುದಿಲ್ಲ. ಚುನಾವಣೆ ದಿನದ ರಜೆಯನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳದೆ ಮತದಾನ ಮಾಡಬೇಕು. ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ ಎಂದರು.

ಅಭಿಯಾನದಲ್ಲಿ ಪುಲಿಕೇಶಿನಗರದ ಎಸಿ ಸುಹೇಲ್ ಅಹ್ಮದ್, ಕಾಲೇಜಿನ ಪ್ರಾಂಶುಪಾಲೆ ಕೆ.ವನಿತಾ, ಪ್ರೊ.ಮುಹಮ್ಮದ್ ಮಸ್ಸೂರ್ ನೌಮಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News