ಬಿಬಿಎಂಪಿ ಭ್ರಷ್ಟ ಅಧಿಕಾರಿಗಳು ನರಕಕ್ಕೆ ಹೋಗುತ್ತಾರೆ: ಹೈಕೋರ್ಟ್

Update: 2019-04-02 16:07 GMT

ಬೆಂಗಳೂರು, ಎ.2: ಅಪಾರ್ಟ್‌ಮೆಂಟ್‌ಗಳಿಗೆ ಸ್ವಾಧೀನಪತ್ರ(ಒಸಿ) ನೀಡಲು ವಿಳಂಬ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಗರದ 198 ವಾರ್ಡ್‌ಗಳಲ್ಲಿ ಒಸಿ ಕೋರಿದ ಅರ್ಜಿಗಳ ವಿವರವನ್ನು ನೀಡಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.

ಅಪಾರ್ಟ್‌ಮೆಂಟ್‌ಗಳಿಗೆ ಸ್ವಾಧೀನಪತ್ರ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತ್ಯನಾರಾಯಣ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ಪ್ರತಿಕ್ರಿಯಿಸಿ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಈ ಭ್ರಷ್ಟಾಚಾರದಲ್ಲಿ ಮುಳಗಿರುವವರಿಗೆ ಒಳ್ಳೆಯ ಸಾವು ಬರುವುದಿಲ್ಲ ಎಂದು ನ್ಯಾಯಪೀಠವು ತೀವ್ರ ವಾಗ್ದಾಳಿ ನಡೆಸಿತು.

ಸ್ವಾಧೀನ ಪತ್ರ ನೀಡಲು ವಿಳಂಬ ಮಾಡುತ್ತೀರಿ. ಏಕೆ ಹೀಗೆ ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಕೇಳಿದರೆ ನೀತಿ ಸಂಹಿತೆ ಜಾರಿಯ ಬಗ್ಗೆ ಕುಂಟು ನೆಪ ಹೇಳುತ್ತೀರಿ, ನೀವು ಕೇಳಿದಷ್ಟು ಹಣ ನೀಡಿದರೆ ಯಾವ ನೀತಿ ಸಂಹಿತೆಯೂ ನಿಮಗೆ ಅಡ್ಡ ಬರುವುದಿಲ್ಲ. ಸತ್ತವರ ಸಮಾಧಿ ಅನುಮತಿಗೆ 20 ಸಲ ನನ್ನನ್ನೆ ಅಲೆದಾಡಿಸಿದ್ದು ನನಗೆ ಇನ್ನೂ ನೆನಪು ಇದೆ ಎಂದು ನ್ಯಾಯಪೀಠವು ತಿಳಿಸಿತು.

ಒಸಿ ಕೋರಿದ ಅರ್ಜಿಗಳು ಎಷ್ಟು ಬಾಕಿ ಇವೆ. ಎಷ್ಟು ಅರ್ಜಿಗಳು ಇತ್ಯರ್ಥವಾಗಿವೆ. ಎಷ್ಟು ಬಾಕಿ ಇವೆ ಎಂಬುದರ ಕುರಿತು ಎ.8ರೊಳಗೆ ಸಂಪೂರ್ಣ ವಿವರಣೆ ನೀಡಬೇಕೆಂದು ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿಗಳು ನೇರವಾಗಿ ನರಕಕ್ಕೆ ಹೋಗುತ್ತಾರೆ ಎಂದು ನ್ಯಾಯಪೀಠವು ಹೇಳಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಾಗಲು ಬಿಬಿಎಂಪಿ ಆಯುಕ್ತರಿಗೆ ನ್ಯಾಯಪೀಠವು ವಾರೆಂಟ್ ಜಾರಿಗೊಳಿಸಿತು. ಹೀಗಾಗಿ, ಬಿಬಿಎಂಪಿ ನ್ಯಾಯಪೀಠಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ವಾರೆಂಟ್‌ನ್ನು ನ್ಯಾಯಪೀಠವು ವಾಪಸ್ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News