ಮೋದಿ ನಾಯಕತ್ವದ ಗುಣ ಒಪ್ಪಿ ಬಿಜೆಪಿ ಸೇರಿದೆ: ಮಾಧ್ಯಮ ಸಂವಾದದಲ್ಲಿ ಎಸ್.ಎಂ.ಕೃಷ್ಣ

Update: 2019-04-03 16:49 GMT

ಬೆಂಗಳೂರು, ಎ.3: ಪ್ರಧಾನಿ ಮೋದಿಯಿಂದ ಪ್ರೇರೇಪಿತನಾಗಿ, ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಯಾದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 5 ವರ್ಷಗಳ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ರಹಿತ, ದಕ್ಷ ಆಡಳಿತವನ್ನು ನೀಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ತಪ್ಪು ದಾರಿಯಲ್ಲಿ ಸಾಗುತ್ತಿದ್ದ ದೇಶವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಮೋದಿ ಆಡಳಿತದಲ್ಲಿ ಜಿಡಿಪಿ ಅತಿಹೆಚ್ಚು ಪ್ರಗತಿ ಕಂಡಿದೆ. ನೋಟು ಅಮಾನ್ಯೀಕರಣವು ಸಮಾಜವಾದಿ ಪಕ್ಷದ ಕನಸಾಗಿತ್ತು. ನಾನು ಇದನ್ನು ಕಾಂಗ್ರೆಸ್‌ನಲ್ಲಿದ್ದಾಗಲೇ ಸ್ವಾಗತಿಸಿದ್ದೆ. ಅನಂತರ ಸರ್ಜಿಕಲ್ ಸ್ಟ್ರೈಕ್ ಅನ್ನೂ ಸ್ವಾಗತಿಸಿದ್ದೆ. ಪಾಕಿಸ್ತಾನ ಇಂತಹ ಭಾಷೆಗಷ್ಟೇ ಬಗ್ಗಲು ಸಾಧ್ಯವಾಗುತ್ತದೆ. ಇಂತಹ ಕೆಲಸಕ್ಕೆ ಮೋದಿ ಪ್ರತಿನಿಧಿಯಾಗಿ ನಿಂತಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿನ ಅನುವಂಶಿಕ ರಾಜಕಾರಣವನ್ನು ವಿರೋಧಿಸಿ ಬಿಜೆಪಿಗೆ ಸೇರ್ಪಡೆಯಾದೆ. ಅರ್ಹತೆ ಇಲ್ಲದವರು ಕೇವಲ ಕುಟುಂಬದ ಹಿನ್ನೆಲೆ ಮುಂದಿಟ್ಟುಕೊಂಡು ರಾಷ್ಟ್ರ ರಾಜಕಾರಣ ಮಾಡುವುದಕ್ಕೆ ತಮ್ಮ ಮನಸ್ಸು ಒಪ್ಪಲಿಲ್ಲ. ಕಾಂಗ್ರೆಸ್ ಪಕ್ಷ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬರೆದುಕೊಟ್ಟಂತಹ ಆಸ್ತಿಯಾಗಿದೆ. ಇಂಥ ಪರಿಸ್ಥಿತಿ ನನ್ನನ್ನು ಬಿಜೆಪಿಗೆ ಸೇರಲು ಪ್ರೇರಣೆಯಾಯಿತು ಎಂದು ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಮೊಮ್ಮಕ್ಕಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಪ್ರಸ್ತಾಪಿಸಿದ ಕೃಷ್ಣ, ವಂಶಪಾರಂಪರ್ಯ ಆಡಳಿತಕ್ಕೆ ಮೊದಲಿನಿಂದಲೂ ನನ್ನ ವಿರೋಧವಿತ್ತು. ದೇವೇಗೌಡರು ಹಾಗೂ ಮೊಮ್ಮಕ್ಕಳ ಸ್ಪರ್ಧೆಗೂ ವಿರೋಧವಿದೆ. ನಾಳೆ(ಎ.4) ಮಂಡ್ಯದಲ್ಲಿ ಬಿಜೆಪಿ ಬೆಂಬಲಿಸಿರುವ ಸುಮಲತಾ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ. ಅಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುವೆ ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಯಾವುದೇ ಪರಿವಾರದ ಪೋಷಣೆ ಮಾಡುತ್ತಿಲ್ಲ. ಅನುವಂಶಿಕ ರಾಜಕಾರಣ ಮಾಡುತ್ತಿಲ್ಲ. ಅವರ ವ್ಯಕ್ತಿತ್ವದಿಂದ ಆಕರ್ಷಿತನಾಗಿದ್ದು, ಇಂತಹ ವ್ಯಕ್ತಿ ರಾಷ್ಟ್ರ ರಾಜಕಾರಣಕ್ಕೆ ಅಗತ್ಯವಿದೆ ಎಂದು ಭಾವಿಸಿ ಈ ನಿರ್ಣಯ ತೆಗೆದಿದ್ದೇನೆ. ಅವರ ಆಡಳಿತದಲ್ಲಿ ದೇಶ ಹಲವು ವಿಚಾರಗಳಲ್ಲಿ ಅಭಿವೃದ್ಧಿ ಕಂಡಿದೆ. ಈ ಕಾರಣಗಳಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಇನ್ನೂ ಐದು ವರ್ಷ ಮುನ್ನಡೆಸಬೇಕು ಎಂದು ತಿಳಿಸಿದರು.

ಹಿಂಬಾಗಿಲು ಹಾಗೂ ಮುಂಬಾಗಿಲಿನ ರಾಜಕಾರಣದ ಬಗ್ಗೆ ಮಾತನಾಡಿದ ಅವರು, 1999ರ ನಂತರ ಜನತಾದಳ ಬಿಜೆಪಿ ಜತೆ ಸೇರಿ ಸರಕಾರ ರಚನೆ ಮಾಡಿದ್ದು ಹಿಂಬಾಗಿಲಿನ ರಾಜಕಾರಣವಲ್ಲವೇ? ಅವರವರ ಪ್ರವೃತ್ತಿ, ಅವಸರ ಏನಿತ್ತೋ ಗೊತ್ತಿಲ್ಲ. ಆದರೆ, ಎಲ್ಲವನ್ನೂ ಚರಿತ್ರೆ ಹೇಳುತ್ತದೆ. ಅದನ್ನು ಯಾರೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ಚುನಾವಣೆ ಬಳಿಕ ಸಮ್ಮಿಶ್ರ ಸರಕಾರ ಭವಿಷ್ಯ ನಿರ್ಧಾರ: ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ದೋಸ್ತಿ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆಯುತ್ತಿದ್ದರೂ ಅವರ ಆಡಳಿತ ನಿರಾಸೆ ಮೂಡಿಸಿದೆ. ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರಕಾರ ಆದ್ಯತೆ ನೀಡಿಲ್ಲ. ಕೇವಲ ಕುರ್ಚಿ ಉಳಿಸಿಕೊಳ್ಳಲು ಎರಡೂ ಪಕ್ಷಗಳು ಸರ್ಕಸ್ ಮಾಡುತ್ತಿವೆ ಎಂದು ಕೃಷ್ಣ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News