ಸಾಲಮನ್ನಾ ಸುಳ್ಳು ಭರವಸೆ ಎಂದು ಸರಕಾರದ ಅಧಿಕಾರಿಯೊಬ್ಬರು ಅಂಬರೀಶ್ ಗೆ ಹೇಳಿದ್ದರು: ಸುಮಲತಾ

Update: 2019-04-04 13:16 GMT

ಬೆಂಗಳೂರು, ಎ.4: ಸರಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ರೈತರ ಸಾಲಮನ್ನಾ ಸಾಧ್ಯವೇ? ಸಾಲಮನ್ನಾ ಎಂಬುದು ಸುಳ್ಳು ಭರವಸೆಯಾಗಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ಅಂಬರೀಶ್ ಮುಂದೆ ಹೇಳಿದ್ದರು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿರುವ 48 ಸಾವಿರ ಕೋಟಿ ಸಾಲಮನ್ನಾದ ಘೋಷಣೆಯು ಸುಳ್ಳು ಭರವಸೆಯಾಗಿದೆ ಎಂದು ಸರಕಾರದ ಆಪ್ತ ಅಧಿಕಾರಿಯೊಬ್ಬರು ಅಂಬರೀಶ್ ಬಳಿ ಮಾಹಿತಿ ಹಂಚಿಕೊಂಡಿದ್ದರು ಎಂದು ತಿಳಿಸಿದರು.

ಮಂಡ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿಕೂಟಕ್ಕೆ ಸ್ಥಳೀಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದ ನಂತರ ಮುಂದೆ ರಾಜಕೀಯವಾಗಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರ ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಆರಂಭದಲ್ಲಿ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ. ಅಂಬರೀಶ್ ಹೋದ ನಂತರ ಮಂಡ್ಯದ ಜನರ ಜತೆಗಿನ ಸಂಪರ್ಕ ಹೆಚ್ಚಾಯಿತು. ಜನ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಎಂಬುದನ್ನು ಜಿಲ್ಲೆಯಾದ್ಯಂತ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಮತ್ತೆ ಮಂಡ್ಯಕ್ಕೆ ಬರಬೇಡಿ ಎಂದಿದ್ದರು ಮಂಡ್ಯದ ಜನತೆ. ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ನನಗೆ ಟಿಕೆಟ್ ಸಿಗದಿದ್ದರೆ ಏನು ಮಾಡಬೇಕು ಎಂದಾಗಲೂ ಪಕ್ಷೇತರರಾಗಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು ಎಂದು ತಿಳಿಸಿದರು.

ಪಕ್ಷೇತರರಾಗಿ ಸ್ಪರ್ಧಿಸಿದಾಗ ನನಗೆ ಇನ್ನಷ್ಟು ಬೆಂಬಲಬೇಕು ಎಂಬ ಪರಿಸ್ಥಿತಿಯ ಅರಿವಾಯಿತು. ಬಿಜೆಪಿಯ ಯಡಿಯೂರಪ್ಪ ಮತ್ತು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಯಡಿಯೂರಪ್ಪನವರು ಬೆಂಬಲ ನೀಡುವ ಭರವಸೆ ನೀಡಿದರು ಎಂದರು.

ಎಲ್.ಆರ್.ಶಿವರಾಮೇಗೌಡರು ಆರು ತಿಂಗಳು ಸಂಸದರಾಗಿದ್ದರು. ಅವರದ್ದೇ ಪಕ್ಷ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಹತಾಶೆಯಿಂದ ಮಾತನಾಡಿರಬಹುದು. ನಾನು ಯಾವುದೇ ಟೀಕೆಗಳಿಗೆ ಪ್ರತಿ ಟೀಕೆ ಮಾಡುವುದಿಲ್ಲ. ರಾಜಕಾರಣಕ್ಕಾಗಿ ನಾನು ಯಾರನ್ನೂ ಟೀಕಿಸುತ್ತಿಲ್ಲ. ಪ್ರತಿಯೊಬ್ಬ ಹೆಣ್ಣಿನ ಹಿಂದೆಯೂ ಒಬ್ಬ ಕಾಳಿ ಇರುತ್ತಾಳೆ. ನಾನು ಅನ್ಯಾಯದ ವಿರುದ್ಧ ಕಾಳಿಯಾಗುತ್ತೇನೆ ಹೊರತು ರಾಜಕೀಯ ಟೀಕೆಗಳಿಗಲ್ಲ ಎಂದು ಹೇಳಿದರು.

ಸ್ನೇಹಿತರು ದೂರವಾಗುವ ಸಂಕಟ: ನಾಮಪತ್ರ ಸಲ್ಲಿಸುವವರೆಗೂ ಅಳುತಿದ್ದೆ. ಚುನಾವಣೆಯಿಂದ ಬಹಳಷ್ಟು ಸಂಬಂಧಗಳು, ಸ್ನೇಹಿತರು ದೂರವಾಗುತ್ತಾರೆ ಎಂಬ ಸಂಕಟ ನನ್ನನ್ನು ಕಾಡುತ್ತಿತ್ತು. ಅನಂತರ ನಡೆದ ಬೆಳವಣಿಗೆಗಳು ನನ್ನನ್ನು ಗಟ್ಟಿಗೊಳಿಸಿವೆ. ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.

ಸಿಂಗಪೂರ್ ಸಾಧ್ಯವಿಲ್ಲ: ನಾನು ಆರಂಭದಲ್ಲಿ ರಾಜಕೀಯ ಹೆಜ್ಜೆ ಇಟ್ಟಾಗ ಇದು ಸಾಧ್ಯನಾ ಅನ್ನೋ ಪ್ರಶ್ನೆ ಬಂತು. ಮಂಡ್ಯ ಜನರ ಪ್ರೀತಿ ಅಭಿಮಾನ ನನಗೆ ಹೆಚ್ಚಿನ ವಿಶ್ವಾಸ ತುಂಬಿದೆ. ಅಂಬಿ ವಸತಿ ಸಚಿವರಾಗಿದ್ದಾಗ ಒಂದಷ್ಟು ಕೆಲಸ ಮಾಡಿದ್ದರು. ಇನ್ನು ಸಾಕಷ್ಟು ಕನಸು ಕಂಡಿದ್ದರು. ಅದನ್ನು ನನಸು ಮಾಡುವತ್ತ ನನ್ನ ಹೆಜ್ಜೆ ಸಾಗಿದೆ. ಹಾಗಂತ ಗೆದ್ದ ತಕ್ಷಣ ಸಿಂಗಪೂರ್ ಮಾಡಿಬಿಡ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಆದರೆ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜೆಡಿಎಸ್ ಅಭಿವೃದ್ಧಿ ಮಾಡಿಲ್ಲ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಜೆಡಿಎಸ್ ಶಾಸಕರು, ಸಚಿವರು ಕಾಂಗ್ರೆಸ್‌ಗೆ ಹೆಚ್ಚು ಮತ ಹಾಕಿರುವ ಪ್ರದೇಶಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಕಾಂಗ್ರೆಸಿಗರ ವ್ಯಾಪಾರ, ಉದ್ದಿಮೆಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿತರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಈ ದಬ್ಬಾಳಿಕೆಯಿಂದ ಬೇಸತ್ತು ಸ್ಥಳೀಯ ಕಾಂಗ್ರೆಸಿಗರು ಸ್ವಾಭಿಮಾನದ ರಾಜಕಾರಣಕ್ಕಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಅಭಿಮಾನಿಗಳ ಮತದ ನಿರೀಕ್ಷೆಯಿಲ್ಲ: ಅಂಬರೀಶ್ ಅಭಿಮಾನಿಗಳೆಲ್ಲ ನನಗೆ ವೋಟು ಹಾಕುತ್ತಾರೆ ಎಂಬ ನಿರೀಕ್ಷೆ ಇಲ್ಲ. ಆದರೆ, ಅವರು ನಮ್ಮ ಪ್ರತಿಸ್ಪರ್ಧಿಗೆ ಮತ ಹಾಕುತ್ತಾರೆ ಎಂಬುದು ಸುಳ್ಳು. ಅಭಿಮಾನವೇ ಬೇರೆ, ಮತದಾನವೇ ಬೇರೆ, ಯಶ್ ಮತ್ತು ದರ್ಶನ್ ನನ್ನ ಮನೆಯಲ್ಲಿ ಅಭಿಷೇಕ್‌ನಂತೆ ಕುಟುಂಬ ಸದಸ್ಯರು. ಸ್ವಯಂ ಪ್ರೇರಿತವಾಗಿಯೇ ಪ್ರಚಾರಕ್ಕೆ ಬರುತ್ತಿದ್ದಾರೆ. ಅಲ್ಲದೆ, ಸುದೀಪ್ ಬರದೇ ಇರುವ ಬಗ್ಗೆ ನನಗೆ ಆಕ್ಷೇಪವಿಲ್ಲ. ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು. ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಪ್ರಚಾರಕ್ಕೆ ಬಂದಿಲ್ಲ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ನುಡಿದರು.

ನನ್ನ ಗುರುತು ಅಂಬರೀಶ್: ಹುಚ್ಚೇಗೌಡರ ಸೊಸೆ, ಅಭಿಷೇಕನ ತಾಯಿ ಎಂಬುದು ನನಗೆ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಅಲ್ಲ. ಅದು ನನ್ನ ಗುರುತು. ಆದರೆ, ರಾಜಕಾರಣಕ್ಕೆ ಇದೆಲ್ಲವನ್ನೂ ಮೀರಿ ಜನರ ಪ್ರೀತಿ ಬೇಕು. ನಾನು ಗೆದ್ದರೆ ಜಿಲ್ಲೆಯ ಗಂಭೀರ ಸಮಸ್ಯೆಗಳಾದ ಕಬ್ಬು, ಕಾವೇರಿ, ಸಕ್ಕರೆ ಕಾರ್ಖಾನೆಗಳ ಸಮಸ್ಯೆಯನ್ನು ಬಗೆಹರಿಸುತ್ತೇನೆ. ನಾನು ಸ್ಪರ್ಧಿಸಿರುವುದರಿಂದ ಚಿತ್ರರಂಗಕ್ಕೆ ತೊಂದರೆಯೂ ಆಗಿಲ್ಲ, ವಿಭಜನೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ ಸಂವಾದದಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವಶೆಣೈ, ವರದಿಗಾರರ ಕೂಟದ ಚಂದ್ರಶೇಖರ್ ಉಪಸ್ಥಿತರಿದ್ದರು.

ಚುನಾವಣೆ ನಂತರ ನನ್ನ ಬೆಂಬಲ ಯಾರಿಗೆ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಬಿಜೆಪಿ ಬೆಂಬಲಿಸಿದೆ. ಅದಕ್ಕೂ ಮೊದಲು ರೈತ ಸಂಘ ನನ್ನ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ನಾನು ಕರೆಯದೇ ಇದ್ದರೂ ಸ್ವಯಂಪ್ರೇರಿತವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆ.
-ಸುಮಲತಾ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News