ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮಂತ್ರಿ ಸ್ಥಾನ: ಬಿ.ಎಸ್.ಯಡಿಯೂರಪ್ಪ

Update: 2019-04-05 12:27 GMT

ಬೆಂಗಳೂರು, ಎ.5: ಹಿಂದು-ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ. ಆದರೆ, ಕೆ.ಎಸ್.ಈಶ್ವರಪ್ಪ ಉಪಯೋಗಿಸುವ ಪದಗಳಲ್ಲಿ ಇತಿ-ಮಿತಿ ಇರಬೇಕು ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ, ಕೊಡುವುದು ಇಲ್ಲ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಹಿಂದೆ ಸರಕಾರ ರಚನೆ ಮಾಡಿದಾಗ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಮಂತ್ರಿ ಸ್ಥಾನಮಾನ ನೀಡಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ಜನರ ಆಶೀರ್ವಾದದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ, ಪಕ್ಷದಿಂದ ಒಬ್ಬ ಮುಸ್ಲಿಮರನ್ನು ಮತ್ತೆ ಮಂತ್ರಿ ಮಾಡುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದರು.

ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್‌ನವರು ಮಾತ್ರ ಇಲ್ಲದ ಕಟ್ಟು ಕತೆ ಕಟ್ಟುತ್ತಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಮೋದಿಯವರ ಮೆಚ್ಚುಗೆ ಜಾಸ್ತಿ ಆಗಿದೆ. 2014 ಕ್ಕಿಂತ ಶೇ.15 ರಷ್ಟು ಮತ ಹೆಚ್ಚಿಗೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯೇ ಬಿಜೆಪಿಗೆ ಲಾಭ. ಮೈತ್ರಿ ಸರಕಾರ ಗೊಂದಲದ ಗೂಡಾಗಿದೆ. ಲೋಕಸಭೆ ಚುನಾವಣೆ ಬಳಿಕ ಆಪರೇಷನ್ ಕಮಲದ ಅಗತ್ಯವೇ ಇಲ್ಲ. ಆಂತರಿಕ ಕಚ್ಚಾಟದಿಂದ ಮೈತ್ರಿ ಸರಕಾರ ಉರುಳುತ್ತದೆ. 20-22ಕ್ಕೂ ಹೆಚ್ಚು ಅತೃಪ್ತ ಶಾಸಕರು ತಾವಾಗಿಯೇ ಹೊರಗೆ ಬರುತ್ತಾರೆ. ನಾವೂ ಸಹ ಕಾದು ನೋಡುತ್ತಿದ್ದೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಮುಗಿದ ಬಳಿಕ ಶಾಸಕರ ನಿಲುವಿನ ಮೇಲೆ ಸರಕಾರ ನಿಂತಿದೆ. ಆಪರೇಷನ್ ಪ್ರಶ್ನೆಯೇ ಇಲ್ಲ. ಬಿಜೆಪಿ 22 ಸ್ಥಾನಗನ್ನು ಗೆದ್ದರೆ ಬದಲಾವಣೆ ಆಗುತ್ತೆ. ಅನೇಕ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಂದಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಈ ಚುನಾವಣೆಯಲ್ಲಿ ಸೋಲುತ್ತಾರೆ. ದೇವೇಗೌಡರಿಗೂ ಅದೇ ಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದರು.

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್‌ಕುಮಾರ್ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಆದರೆ ಹೈಕಮಾಂಡ್ ನಾಯಕರು ಬದಲಿಸಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್‌ಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದೇವೆ. ತೇಜಸ್ವಿ ಹಾಗೂ ಪಕ್ಷದ ನಡುವೆ ಯಾವುದೇ ಭಿನ್ನಮತ ಇಲ್ಲ. ಅಮಿತ್ ಶಾ ರೋಡ್ ಶೋನಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ ಎಂದರು.

ಅಡ್ವಾಣಿ ಟ್ವೀಟ್‌ಗೆ ಪ್ರತಿಕ್ರಿಯೆ: ಬಿಜೆಪಿ ವಿರೋಧಿಸುವವರನ್ನು ದೇಶ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂಬ ಅಡ್ವಾಣಿ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್‌ವೈ, ಅಡ್ವಾಣಿ ಹೇಳಿಕೆ ನಮಗೆ ಮಾರ್ಗದರ್ಶನವಿದ್ದಂತೆ. ಅವರ ಅಭಿಪ್ರಾಯವನ್ನು ಸ್ವಾಗತಿಸುತ್ತೇನೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಬರುವುದಿಲ್ಲ. ಹಿರಿಯರ ಮಾರ್ಗದರ್ಶನ ನಮಗೆ ಸದಾ ಇರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಹಿಂದೆಯೂ ಮಾಡುತ್ತಿದ್ದರು. ಈಗಲೂ ಮಾಡುತ್ತಾ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News