ಯುಗಾದಿ ಹಬ್ಬಕ್ಕೆ ಸಂಭ್ರಮದಿಂದ ಸಜ್ಜುಗೊಂಡ ಜನತೆ

Update: 2019-04-05 15:52 GMT

ಬೆಂಗಳೂರು, ಎ.5: ಚುನಾವಣೆಯ ಭರಾಟೆಯ ನಡುವೆಯು ಯುಗಾದಿ ಹಬ್ಬದ ಸಂಭ್ರಮಕ್ಕೆ ನಾಡಿನ ಜನತೆ ಸಜ್ಜುಗೊಂಡಿದ್ದಾರೆ. ನಗರದ ಮಾರುಕಟ್ಟೆಗಳಲ್ಲಿ ಹೂ, ಹಣ್ಣುಗಳು, ಸಿಹಿ ತಿನಿಸುಗಳ ಕೊಳ್ಳುವಿಕೆಯ ವ್ಯವಹಾರ ಜೋರಾಗಿ ನಡೆದಿದೆ.

ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಆರ್‌ಎಂಸಿ, ಗಾಂಧಿಬಝಾರ್,ಯಶವಂತಪುರದ ಮಾರುಕಟ್ಟೆಗಳಲ್ಲಿ ಹೂವು ಹಣ್ಣುಗಳ ಭರ್ಜರಿ ವ್ಯಾಪಾರ ವಹಿವಾಟು ನಡೆದಿದ್ದು, ಮಾವಿನ ಸೊಪ್ಪು, ಬೇವಿನ ಹೂ-ಎಲೆಗಳಿಗೆ ಭಾರಿ ಬೇಡಿಕೆ ಇರುವುದು ಕಂಡು ಬಂದಿದೆ. ಯುಗಾದಿ ಹಬ್ಬದ ಪ್ರಯುಕ್ತ ಸಾಮಗ್ರಿಗಳ ಬೆಲೆ ದುಬಾರಿಯಾಗಿದೆ.

ಹಳೇ ಮೈಸೂರು ಭಾಗದ ಜನತೆಗೆ ಯುಗಾದಿ ವಿಶೇಷ ಹಬ್ಬವಾಗಿದೆ. ಆ ದಿನ ಎಣ್ಣೆ ನೀರು ಸ್ನಾನ, ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುವ ರೂಪಕವಾಗಿ ಬೇವು ಬೆಲ್ಲವನ್ನು ಸೇವಿಸಲಾಗುತ್ತದೆ. ನಮ್ಮನ್ನು ಅಗಲಿದ ಹಿರಿಯರನ್ನು ಸ್ಮರಿಸುವುದು ಈ ದಿನದ ವಿಶೇಷವಾಗಿದೆ. ಯುಗಾದಿಯಂದು ಒಬ್ಬಟ್ಟು, ಕೋಸಂಬರಿ, ಬಗೆ ಬಗೆಯ ಪಲ್ಯಗಳು ಸೇರಿದಂತೆ ಹಲವಾರು ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಯುಗಾದಿ ನಂತರದ ದಿನ ಮಾಂಸದೂಟಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಗ್ರಾಮಾಂತರ ಭಾಗಗಲ್ಲಿ ಯುಗಾದಿಯ ಮಾಂಸದೂಟಕ್ಕಾಗಿಯೆ ಚೀಟಿ(ಕಂತು ಕಟ್ಟುವ) ನಡೆಸಲಾಗುತ್ತದೆ. ಅದರಿಂದ ಬದ ಹಣದಿಂದ ಕುರಿ, ಮೇಕೆಗಳನ್ನು ಕೊಳ್ಳಲಾಗುತ್ತದೆ. ಅಥವಾ ಗುಡ್ಡೆಬಾಡು ಪಡೆಯುವುದೂ ಆಗಿರುತ್ತದೆ.

ವಿಶೇಷ ಬಸ್ ಸೇವೆ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬೆಂಗಳೂರಿನಿಂದ ರಾಜ್ಯ ಮತ್ತು ಹೊರ ರಾಜ್ಯದ ನಾನಾ ಭಾಗಗಳಿಗೆ ಎ.5 ಮತ್ತು ಎ.6ರಂದು ಹೆಚ್ಚುವರಿಯಾಗಿ 600ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೆ ಎ.7ರಂದು ನಾನಾ ಭಾಗಗಳಿಂದ ಬೆಂಗಳೂರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಮಂಗಳೂರು, ಹಾಸನ, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.

ಮೈಸೂರು ರಸ್ತೆಯ ಸ್ಯಾಟಲೈಟ್‌ನಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಬಸ್‌ಗಳು ತೆರಳಲಿವೆ. ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ಇತರೆ ಸ್ಥಳಗಳಿಗೆ ಸಂಚರಿಸುವ ಬಸ್‌ಗಳು ಶಾಂತಿನಗರದಲ್ಲಿನ ಕೇಂದ್ರ ಘಟಕ-4 ಮತ್ತು ಘಟಕ-2ರ ಮುಂಭಾಗದಿಂದ ಹೊರಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News