ತೇಜಸ್ವಿ ಸೂರ್ಯ ಪರ ಪ್ರಚಾರಕ್ಕೆ ಗೈರು: ತೇಜಸ್ವಿನಿ ಅನಂತಕುಮಾರ್ ನಡೆ ಇನ್ನೂ ನಿಗೂಢ!

Update: 2019-04-07 14:35 GMT
ತೇಜಸ್ವಿನಿ ಅನಂತಕುಮಾರ್ 

ಬೆಂಗಳೂರು, ಎ.7: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತಕುಮಾರ್, ಈ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಅವರ ನಡೆ ಇನ್ನೂ ನಿಗೂಢವಾಗಿದೆ.

ಎ.2 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಬೆಂಗಳೂರು ನಗರಕ್ಕೆ ಆಗಮಿಸಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಅನಂತರ ಅವರು ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ, ಪ್ರಚಾರವನ್ನೂ ಮಾಡಿಲ್ಲ. ಅಲ್ಲದೆ, ಅವರೇ ಸಂಸ್ಥಾಪಕರಾದ ಅದಮ್ಯ ಚೇತನ ಸಂಸ್ಥೆಯ ಸಿಬ್ಬಂದಿಯೂ ಎಲ್ಲಿಯೂ ಈ ಬಾರಿ ಪ್ರಚಾರಕ್ಕೆ ಪಾಲ್ಗೊಳ್ಳದಿರುವುದು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆ ವತಿಯಿಂದಲೂ 100ಕ್ಕೂ ಹೆಚ್ಚು ಮಂದಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಮನೆ ಮನೆ ಪ್ರಚಾರ, ಪಾದಯಾತ್ರೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಪಕ್ಷಕ್ಕೆ ಪ್ರಚಾರದ ವ್ಯವಸ್ಥೆ ತಲುಪುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಅದಮ್ಯ ಚೇತನ ಸಂಸ್ಥೆ ಸಿಬ್ಬಂದಿ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

'ತೇಜಸ್ವಿನಿ ಅನಂತಕುಮಾರ್‌ರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಅವರು ಖುಷಿಯಾಗಿದ್ದಾರೆ. ಈಗಾಗಲೇ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇದ್ದಂತಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೊಂಡಿದ್ದಾರೆ.

ಆದರೆ, ಈ ಬಗ್ಗೆ ತೇಜಸ್ವಿನಿ ಅನಂತಕುಮಾರ್ ಬಹಿರಂಗವಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಅವರ ಮುಂದಿನ ನಡೆ ಏನಿರಲಿದೆ ಎಂಬ ಕುತೂಹಲ ಮೂಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತೇಜಸ್ವಿನಿ ಅನಂತ ಕುಮಾರ್‌ಗೆ ಅವಕಾಶ ಕೈತಪ್ಪಿರುವ ಬಗ್ಗೆ ಪಕ್ಷದ ಕೆಲ ಮುಖಂಡರು, ಬೆಂಬಲಿಗರು, ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ. ಆದರೆ ಇದು ಪರಿಣಾಮ ಬೀರುವುದೇ ಅಥವಾ ಸಾಂದರ್ಭಿಕ ಅಸಮಾಧಾನ ಕ್ರಮೇಣ ಮರೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News