ಸ್ವಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪ್ರಚಾರ

Update: 2019-04-07 14:54 GMT

ಬೆಂಗಳೂರು, ಎ.7: ಈ ಬ್ಯಾಟರಾಯನಪುರ ಕ್ಷೇತ್ರದಿಂದ ತಾವೆಲ್ಲರೂ ಸೇರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಇದೀಗ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿದ್ದೇನೆ. ದಯವಿಟ್ಟು ಮತ ನೀಡಿ ಆಶೀರ್ವದಿಸಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಮನವಿ ಮಾಡಿದರು.

ತಮ್ಮ ಸ್ವ ಕ್ಷೇತ್ರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರ, ರಾಮಚಂದ್ರಪುರ, ಕುವೆಂಪು ನಗರ ಮತ್ತು ಎಂ.ಎಸ್.ಪಾಳ್ಯಗಳಿಗೆ ತೆರಳಿ ಅವರು ಮತಯಾಚನೆ ಮಾಡಿದರು. ಈ ಚುನಾವಣೆಗೆ ಸ್ಪರ್ಧಿಸುವ ಮುನ್ನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ನಿಮ್ಮ ಬಳಿ ಅಭಿಪ್ರಾಯ ಕೇಳಬೇಕಿತ್ತು. ಆದರೆ, ಅದಕ್ಕೆ ಸಮಯಾವಕಾಶ ಸಿಗಲಿಲ್ಲ. ಕೊನೆಯ ಗಳಿಗೆಯಲ್ಲಿ ಪಕ್ಷದ ನಾಯಕರು ಹೇಳಿದ್ದರಿಂದ ಅವರಿಗೆ ಗೌರವ ಕೊಟ್ಟು ಇದೀಗ ಮತ್ತೊಮ್ಮೆ ನಿಮ್ಮ ಬಳಿ ಮತ ಕೇಳಲು ಬಂದಿದ್ದೇನೆ ಎಂದು ಅವರು ಹೇಳಿದರು.

ವಿದ್ಯಾರಣ್ಯಪುರದಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳ್ಳದೆ ಹಲವು ದಿನಗಳಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಕ್ಕೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ನಾಯಕರು ಜನರ ಸಮಸ್ಯೆಗೆ ಸ್ಪಂದಿಸುವ ಬದಲು, ಸಮಸ್ಯೆ ಸರಿಪಡಿಸಲು ಪ್ರಯತ್ನಿಸುವ ನಮ್ಮಂತವರ ವಿರುದ್ಧ ದೂರು ದಾಖಲಿಸಿ ಚಿಲ್ಲರೆ ರಾಜಕಾರಣ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರಕಾರ ಬರೀ ಶ್ರೀಮಂತರ, ಉದ್ಯಮಿಗಳ ಪರ ಸರಕಾರ. ಅವರಿಂದ ಬಡವರಿಗೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಬದಲಿಗೆ ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಆಗುವಂತೆ ಆಡಳಿತ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಇಲ್ಲಿಂದ ಆಯ್ಕೆ ಆಗಿ ಹೋಗಿರುವ ಸದಾನಂದಗೌಡರು ಒಂದೇ ಒಂದು ದಿನ ಇಲ್ಲಿಗೆ ಬಂದು ನಿಮ್ಮ ಕಷ್ಟ ಸುಖ ಆಲಿಸಲಿಲ್ಲ. ಈ ಕ್ಷೇತ್ರದ ಶಾಸಕನಾಗಿರುವ ನಾನು ಕಳೆದ ಹನ್ನೊಂದು ವರ್ಷಗಳಿಂದ ನಿಮ್ಮ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಂಸದನಾಗಿ ಆಯ್ಕೆ ಆದ ನಂತರವೂ ನಿಮ್ಮ ಸೇವೆ ಮುಂದುವರೆಸುತ್ತೇನೆ ಎಂದು ಕೃಷ್ಣಭೈರೇಗೌಡ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News