ಲೋಕಸಭಾ ಚುನಾವಣೆ-2019: ವಿಶೇಷ ಅಂಚೆ ಚೀಟಿ, ಲಕೋಟೆಗಳ ಬಿಡುಗಡೆ

Update: 2019-04-13 17:07 GMT

ಬೆಂಗಳೂರು, ಎ.13: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹಾಗೂ ಅಂಚೆ ಇಲಾಖೆ ಸಹಯೋಗದೊಂದಿಗೆ ವಿಶೇಷ ಅಂಚೆ ಚೀಟಿಗಳು ಮತ್ತು ಲಕೋಟೆಗಳನ್ನು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ ಬಿಡುಗಡೆ ಮಾಡಿದರು.

ಶನಿವಾರ ನಗರದ ವಾರ್ತಾಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಅಂಚೆ ಚೀಟಿ, ‘ದೇಶದ ಮಹಾ ಉತ್ಸವ’ ಎಂಬ ಶೀರ್ಷಿಕೆಯೊಂದಿಗೆ ವಿನ್ಯಾಸಗೊಂಡಿರುವ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಲಕೋಟೆಯ ಮೇಲೆ ಮತದಾರರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಮಾಹಿತಿ ನೀಡುವಂತಹ ಸಂದೇಶ ರಚಿಸಲಾಗಿದೆ. ಮತದಾರರು ಹೇಗೆ ಮತ ಚಲಾಯಿಸಬೇಕು ಎಂದೂ ಇದೆ. ಅಲ್ಲದೆ, ಮತದಾನದ ವಿವಿಧ ಪ್ರಕ್ರಿಯೆಗಳೂ ಸೇರಿದಂತೆ ಮತ ಚಲಾವಣೆ ವಿಧಾನದ ಕುರಿತು ಚಿತ್ರ ಸಮೇತ ವಿವರಿಸಿ ಲಕೋಟೆಯ ಮೇಲೆ ಮುದ್ರಣ ಮಾಡಲಾಗಿದೆ.

ವಿಶೇಷ ಲಕೋಟೆಯು ದಿವ್ಯಾಂಗ ಮತದಾರರ ಚಿತ್ರಗಳನ್ನೂ ಹೊಂದಿದ್ದು, ವಿಶೇಷವಾಗಿ ವಿಶೇಷಚೇತನರಿಗೆ ಚುನಾವಣಾ ಆಯೋಗ ಕಲ್ಪಿಸಿದ ವಿಶೇಷ ಸೌಲಭ್ಯಗಳಾದ ಗಾಲಿಕುರ್ಚಿಗಳು, ಭೂತಕನ್ನಡಿ, ಸಂಜ್ಞಾಭಾಷೆ ಹಾಗೂ ಅದರ ಸಂಕಲನಕಾರರು, ಮತದಾನದ ದಿನದಂದು ಉಚಿತ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಬಳಸಬಹುದು ಎಂಬ ಸಂದೇಶವೂ ಇದೆ. ಜತೆಗೆ, ಮತದಾರರ ಸಹಾಯವಾಣಿ ಸಂಖ್ಯೆ 1950 ಅನ್ನು ಲಕೋಟೆ ಮೇಲೆ ಎದ್ದು ಕಾಣುವಂತೆ ಮುದ್ರಿಸಲಾಗಿದೆ.

ಮತದಾರರ ಜಾಗೃತಿ ವಿಡಿಯೋ ಬಿಡುಗಡೆ: ಮತದಾರರ ಜಾಗೃತಿ ಮೂಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ವಿಡಿಯೋವನ್ನು ನಿರ್ಮಾಣ ಮಾಡಿದ್ದು, ಜಾಗೃತಿ ಮೂಡಿಸುತ್ತಿದೆ. ಅದನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಭಗವಾನ್ ನಿರ್ದೇಶನದ ಮತದಾನ ಮಹತ್ವದ ಕುರಿತ ಎರಡು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.

ಮಾರ್ಗದರ್ಶಿ ಬಿಡುಗಡೆ: ದೃಷ್ಟಿದೋಷ ಮತ್ತು ಮಂದ ದೃಷ್ಟಿ ಉಳ್ಳವರು ಮತದಾನಕ್ಕೆ ಮುನ್ನವೇ ತಮ್ಮ ಅಭ್ಯರ್ಥಿಯನ್ನು ಗುರುತಿಸುವಂತಾಗಲು ಎಲ್ಲ ಮತದಾನ ಕೇಂದ್ರಗಳಲ್ಲಿ ಮತಪತ್ರದ ಮಾದರಿಯಲ್ಲಿ ಬ್ರೈಲ್ ಲಿಪಿಯಲ್ಲಿ ಮುದ್ರಿಸಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಲಾಗುತ್ತಿದೆ. ಅಂತಹ ಬ್ರೈಲ್ ಲಿಪಿಯ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಲಾಯಿತು.

ಬ್ರೈಲ್ ಅಂಚೆ ಕಾರ್ಡ್: ಬ್ರೈಲ್ ಲಿಪಿಯಲ್ಲಿರುವ ಅಂಚೆ ಕಾರ್ಡ್‌ಗಳು ಮತ್ತು ಮತಪತ್ರಗಳನ್ನು ದೃಷ್ಟಿದೋಷ ಮತ್ತು ಮಂದದೃಷ್ಟಿಯುಳ್ಳವರಿಗೆ ಕಳುಹಿಸಿಕೊಡಲಾಯಿತು. ರಾಜ್ಯದ ಮುಖ್ಯ ಚುನಾವಣಾಧಿಕಾರಿಯು ಬ್ರೈಲ್ ಅಂಚೆ ಕಾರ್ಡ್‌ಗಳು ಹಾಗೂ ಪತ್ರಗಳನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್‌ಗೆ ಹಸ್ತಾಂತರ ಮಾಡಿದರು.

ಬಿಡುಗಡೆ ಬಳಿಕ ಮಾತನಾಡಿದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ, ಸೇನೆ, ವಿಮಾನ ಸೇವೆ ಸೇರಿದಂತೆ ದೇಶದ ಸರಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಅಂಚೆ ಮತದಾನ ಮಾಡಲು ಅವಕಾಶವಿದೆ. ಮತದಾರರು ಮೊದಲೇ ಅಂಚೆಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ಅವರಿಗೆ ಮತದಾನಕ್ಕೆ ಅವಕಾಶ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಶುಕ್ರವಾರದವರೆಗೆ 825 ಮತದಾರರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಶನಿವಾರ ಒಂದು ಸಾವಿರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಮತದಾನದ ಅವಕಾಶವಿರುತ್ತದೆ. ಸರಕಾರಿ ಸೇವೆಯಲ್ಲಿರುವ ಮತವನ್ನು ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುತ್ತದೆ. ಅದಕ್ಕೆ ಯಾವುದೇ ಹಣ ನೀಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದರು.

ಜಾಗೃತಿ: ಯಾವೊಬ್ಬ ಮತದಾರರೂ ಮತದಾನದಿಂದ ಹೊರಗುಳಿಯಬಾರದು ಎಂಬ ಧ್ಯೇಯವಾಕ್ಯದಿಂದ 26 ಜಿಲ್ಲೆಗಳಲ್ಲಿ ಸ್ತಬ್ದ ಚಿತ್ರ ಪ್ರದರ್ಶನದ ಮೂಲಕ ಅರಿವು ಮೂಡಿಸಲಾಗಿದೆ. 5.90 ಪೋಸ್ಟರ್, 1.77 ಲಕ್ಷ ಕರ ಪತ್ರ ಹಂಚಲಾಗಿದೆ. 6600 ಬ್ಯಾನರ್ಸ್‌, 3300 ಪ್ರಚಾರ ಫಲಕಗಳನ್ನು ಹಾಕಲಾಗಿದೆ. ಭಾರತ ಚುನಾವಣಾ ಆಯೋಗ ನಿರ್ಮಿಸಿದ ವಿಡಿಯೋದ ತುಣುಕು 7 ದಿನ 700 ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗಿದೆ.

ಚುನಾವಣೆಯ ಬಗ್ಗೆ ಅರಿವು ಮೂಡಿಸಲು ವಿದ್ಯುತ್ ಬಿಲ್, ನೀರಿನ ಬಿಲ್, ತೆರಿಗೆ ಬಿಲ್, ವೈದ್ಯಕೀಯ ಬಿಲ್, ಹಾಲಿನ ಪ್ಯಾಕೆಟ್ ಸೇರಿದಂತೆ ವಿವಿಧ ಹಂತಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತು 5090 ಸಂಚಾರಿ ತಂಡಗಳಿಂದ 5 ಕೋಟಿ ಜನರನ್ನು ತಲುಪಲಾಗಿದೆ. 26,657 ಜಾಥಾ, ರ್ಯಾಲಿ, ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದೆ.

ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೆಂಗಾವಲು ಪಡೆಯ ವಾಹನದಿಂದ ಮತ್ತೊಂದು ವಾಹನಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬುಡಕಟ್ಟು ಪ್ರದೇಶಗಳಲ್ಲಿ 39 ಮತಗಟ್ಟೆಗಳಿದ್ದು, ಈ ಬೂತ್‌ಗಳನ್ನು ಪಾರಂಪರಿಕ ಶೈಲಿಯಲ್ಲಿ ಅಲಂಕರಿಸಲಾಗುವುದು. ಬುಡಕಟ್ಟು ಜನಾಂಗದ ನಿರ್ದೇಶನಾಲಯ ಈ ನಿಟ್ಟಿನಲ್ಲಿ ನೇತೃತ್ವ ವಹಿಸಲಿದೆ.

ಅಶಕ್ತ ವ್ಯಕ್ತಿಗಳು ಸುಗಮವಾಗಿ ಮತದಾನ ಮಾಡುವ ಸಲುವಾಗಿ ಸಂವಹನಕ್ಕಾಗಿ 30 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದ ಪ್ರೌಢಶಾಲೆ, ಕಾಲೇಜು ಹಾಗೂ ವಿವಿಗಳಲ್ಲಿ 24,518 ಮತದಾರರ ಸಾಕ್ಷರತಾ ಸಂಘ(ಕ್ಲಬ್)(ಇಎಲ್‌ಸಿ) ಸ್ಥಾಪಿಸಲಾಗಿದ್ದು, 16.36 ಲಕ್ಷ ವಿದ್ಯಾರ್ಥಿಗಳನ್ನು ಇಎಲ್‌ಸಿ ಸದಸ್ಯರಾಗಿ, 7064 ಕ್ಯಾಂಪಸ್ ರಾಯಭಾರಿಗಳಾಗಿ 2019 ಎಪ್ರಿಲ್ ಮೊದಲವಾರದವರೆಗೆ ನೋಂದಣಿಗೊಂಡಿದ್ದಾರೆ.

2019 ಲೋಕಸಭಾ ಚುನಾವಣೆಗೆ ರಾಜ್ಯಮಟ್ಟದಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ, ಕ್ರಿಕೆಟಿಗ ರಾಹುಲ್ ದ್ರಾವಿಡ್, ವಿಶೇಷಚೇತನ ಪ್ಯಾರಾ ಒಲಂಪಿಯನ್ ಎಚ್.ಎನ್.ಗಿರೀಶ್, ನಟಿ ಪ್ರಣಿತ ಸುಭಾಷ್, ಸಿಎಸ್‌ಒ ದಿವ್ಯಾಂಗರಾದ ಅಶ್ವಿನಿ ಅಂಗಡಿ ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News