ಸೈನಿಕರ ಅಪಮಾನ ಸಹಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2019-04-18 15:11 GMT

ಬೆಳಗಾವಿ, ಎ.18: ದೇಶಭಕ್ತಿಯ ಭಾವನೆಯನ್ನು ಹಸಿವಿನ ಜೊತೆ ಜೋಡಿಸಿ, ಸೇನೆಯಲ್ಲಿ ಸೇರುವ ಯುವಕರ ಬಗ್ಗೆ ಇಲ್ಲಿನ ಮುಖ್ಯಮಂತ್ರಿ ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ಈ ಮಾತನ್ನು ಸ್ವಾಭಿಮಾನಿ ದೇಶದ ನಾಗರಿಕರು ಒಪ್ಪಲು ಸಾಧ್ಯವೇ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಚಿಕ್ಕೋಡಿಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆ ‘ವಿಜಯ ಸಂಕಲ್ಪ ರ‍್ಯಾಲಿ’ಯನ್ನುದ್ದೇಶಿಸಿ ಅವರು ಮಾತನಾಡಿದರು.

ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದವರೂ ಸೇನೆ ಸೇರುತ್ತಾರೆ ಎಂದು ಇಲ್ಲಿನ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಬಡವರು, ಮಧ್ಯಮ ವರ್ಗದ ಯುವಕರು ಸೇನೆಗೆ ಸೇರುತ್ತಾರೆ. ಆದರೆ, ಸೇನೆಗೆ ಸೇರುವವರಿಗೆ ಇವರು ಅಪಮಾನಿಸುತ್ತಾರೆ. ಈ ಒಂದು ಹೇಳಿಕೆಯನ್ನೆ ಮುಂದಿಟ್ಟುಕೊಂಡು, ಇವರ ಇಡೀ ಕುಟುಂಬವನ್ನು ಸಾರ್ವಜನಿಕ ಜೀವನದಿಂದಲೇ ಹೊರಗೆ ಹಾಕಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಕೇಂದ್ರದಲ್ಲಿ ಇವರು ಅಧಿಕಾರಕ್ಕೆ ಬಂದರೆ, ನಮ್ಮ ಯೋಧರಿಗೆ ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡಲು ನೀಡಿರುವ ವಿಶೇಷ ಅಧಿಕಾರವನ್ನು ಹಿಂಪಡೆಯುತ್ತಾರಂತೆ. ಅಲ್ಲದೇ, ದೇಶದ್ರೋಹದ ಕಾನೂನು ತೆಗೆದು ಹಾಕುತ್ತಾರಂತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಪಾಪ ಮಾಡಲು ಅವರಿಗೆ ಅವಕಾಶ ನೀಡಬೇಕೆ? ಈ ಮಹಾಮಿಲಾವಟಿಗಳಿಗೆ ಯೋಧರು, ರೈತರು ಬೇಕಾಗಿಲ್ಲ. ರೈತರ ವಿರುದ್ಧ ವಾರೆಂಟ್ ಹೊರಡಿಸಲಾಗುತ್ತಿದೆ. ರೈತರು ಸಾಲ ಮನ್ನಾ ಬಗ್ಗೆ ಕೇಳಿದರೆ, ಅವರನ್ನು ಅಪಮಾನ ಮಾಡಿ, ಗೂಂಡಾಗಳು ಎಂದು ಕರೆಯುತ್ತಿದ್ದಾರೆ ಎಂದು ಮೋದಿ ದೂರಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ 3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ನೆರವು ತಲುಪಿದೆ. ಆದರೆ, ರಾಜ್ಯದ ರೈತರಿಗೆ ಲಾಭ ಸಿಗುತ್ತಿಲ್ಲ. ಇಲ್ಲಿನ ಸರಕಾರ ಕಡಿಮೆ ಪ್ರಮಾಣದಲ್ಲಿ ರೈತರ ಪಟ್ಟಿ ನೀಡಿದೆ. ಹೆಚ್ಚು ಸಮಯದ ವರೆಗೆ ನಿಮ್ಮ ಹಕ್ಕನ್ನು ಅಡಗಿಸಿಟ್ಟುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಖಾತೆಗೆ ಹಣ ಜಮೆ ಮಾಡಲು, ಇವರು ಪಟ್ಟಿ ನೀಡದಿದ್ದರೆ, ನಾನೇ ಪಟ್ಟಿ ಹೊರಗೆ ತರಿಸುತ್ತೇನೆ ಎಂದು ಮೋದಿ ಹೇಳಿದರು.

25 ಲಕ್ಷ ಕೋಟಿ ರೂ.ಖರ್ಚು: 60 ವರ್ಷ ಮೇಲ್ಪಟ್ಟ ಸಣ್ಣ ರೈತರು ಹಾಗೂ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರುತ್ತಿದ್ದೇವೆ. ಹೈನುಗಾರಿಕೆ ಮಾಡುವವರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು. ರೈತರ ಆದಾಯ ಹೆಚ್ಚಿಸಲು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಗೆ 25 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮ ಭಂಡಾರ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲಿ ಉಗ್ರಾಣಗಳ ನಿರ್ಮಾಣ ಮಾಡುತ್ತೇವೆ. ಕಳೆದ ಐದು ವರ್ಷಗಳಲ್ಲಿ ನಾವು ವಿದ್ಯುತ್ ಬಗ್ಗೆ ಕೆಲಸ ಮಾಡಿದ್ದೇವೆ. ಈಗ ನಾವು ನೀರು ಪೂರೈಸಲು ಕೆಲಸ ಮಾಡುತ್ತೇವೆ. ಇದಕ್ಕಾಗಿ ಹೊಸದಾಗಿ ‘ಜಲಶಕ್ತಿ ಮಂತ್ರಾಲಯ’ ರಚನೆ ಮಾಡಲಾಗುವುದು ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News