ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಸಿಜೆಐ ನಿರ್ವಹಿಸಿದ ರೀತಿ ಸಂಪೂರ್ಣ ತಪ್ಪು: ನ್ಯಾ. ಸಂತೋಷ್ ಹೆಗ್ಡೆ

Update: 2019-04-23 14:50 GMT

ಹೈದರಾಬಾದ್,ಎ.23: ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿ ಅವರು ತನ್ನ ವಿರುದ್ಧದ ಲೈಂಗಿಕ ಕಿರುಕುಳಗಳ ಆರೋಪದ ವಿಚಾರಣೆಯನ್ನು ನಡೆಸಿದ್ದು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಸಂಪೂರ್ಣ ತಪ್ಪಾಗಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಸಂತೋಷ್ ಹೆಗ್ಡೆ ಅವರು ಮಂಗಳವಾರ ಹೇಳಿದರು.

ಆದರೆ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿಯೋರ್ವರು ಸಿಜೆಐ ವಿರುದ್ಧ ಮಾಡಿರುವ ಆರೋಪಗಳು ನಿಜವೇ ಸುಳ್ಳೇ ಎನ್ನುವುದು ತನಗೆ ಗೊತ್ತಿಲ್ಲ. ಹೀಗಾಗಿ ಅವುಗಳ ಬಗ್ಗೆ ಮಾತನಾಡಲು ತಾನು ಬಯಸುವುದಿಲ್ಲ ಎಂದರು.

 ಸಿಜೆಐ ಮಾಡಿರುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಲ್ಲಿ ಸಂಪೂರ್ಣವಾಗಿ ತಪ್ಪಾಗಿದೆ. ಕಕ್ಷಿದಾರರೋರ್ವರ ದೂರಿನ ಮೇರೆಗೆ ವಿಷಯದ ವಿಚಾರಣೆ ನಡೆದಿತ್ತು. ಪೀಠದ ನೇತೃತ್ವವನ್ನು ಸಿಜೆಐ ವಹಿಸಿದ್ದರು. ಆದರೆ ತಾನು ಪೀಠದ ಭಾಗವಾಗಿದ್ದೆ ಎನ್ನುವುದು ಎಲ್ಲಿಯೂ ದಾಖಲಾಗದಂತೆ ಅವರು ನೋಡಿಕೊಂಡಿದ್ದಾರೆ. ಅವರು ಕಲಾಪದಲ್ಲಿ ಭಾಗಿಯಾಗಿದ್ದರು. ಆದರೆ ಆದೇಶಕ್ಕೆ ಸಹಿ ಹಾಕಿಲ್ಲ. ಇತರ ಇಬ್ಬರು ನ್ಯಾಯಾಧೀಶರು ಆದೇಶಕ್ಕೆ ಸಹಿ ಮಾಡಿದ್ದಾರೆ. ಏನಿದರ ಅರ್ಥ ಎಂದು ನ್ಯಾ.ಹೆಗ್ಡೆ ಪ್ರಶ್ನಿಸಿದರು.

ಮೊದಲನೆಯದಾಗಿ ಸಿಜೆಐ ಪೀಠದಲ್ಲಿ ಕುಳಿತುಕೊಳ್ಳಲೇಬಾರದಿತ್ತು. ಅವರು ಯಾವ ಸಂದೇಶವನ್ನು ರವಾನಿಸುತ್ತಿದ್ದಾರೆ?, ಭಾರತದ ಮುಖ್ಯ ನ್ಯಾಯಾಧೀಶರಾಗಿ ಅವರು ಪೀಠದಲ್ಲಿ ಕುಳಿತುಕೊಂಡು ತನ್ನದೇ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಡೆಸಬಹುದೇ?, ಅದು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಸಂಪೂರ್ಣವಾಗಿ ತಪ್ಪಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News