ಉಗ್ರ ದಾಳಿಯ ಹುಸಿ ಬೆದರಿಕೆ ಕರೆ: ಮಾಜಿ ಸೇನಾ ಸಿಬ್ಬಂದಿಯ ಬಂಧನ

Update: 2019-04-27 07:09 GMT

ಬೆಂಗಳೂರು, ಎ.27: ಉಗ್ರ ದಾಳಿ ನಡೆಯಲಿದೆ ಎಂದು ಹುಸಿ ಬೆದರಿಕೆ ಕರೆ ಮಾಡಿ ಮೂರು ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ನಿವೃತ್ತ ಸೇನಾ ಸಿಬ್ಬಂದಿ, ಈಗ ಟ್ರಕ್ ಚಾಲಕನಾಗಿ ದುಡಿಯುತ್ತಿರುವ 65 ವರ್ಷದ ಸ್ವಾಮಿ ಸುಂದರ ಮೂರ್ತಿ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಅವಳಹಳ್ಳಿಯ ಮುನಿವೆಂಕಟಪ್ಪ ಲೇಔಟ್ ನಿವಾಸಿಯೆಂದು ತಿಳಿದು ಬಂದಿದೆ.

ಕರ್ನಾಟಕ ಡಿಜಿ-ಐಜಿಪಿ ಇತ್ತೀಚೆಗೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಗೋವಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪುದುಚ್ಚೇರಿಯ ಪೊಲೀಸ್ ಮುಖ್ಯಸ್ಥರಿಗೆ ಉಗ್ರ ದಾಳಿಯ ಸಂಭಾವ್ಯತೆಯ ಎಚ್ಚರಿಕೆ ನೀಡಿ ಪತ್ರ ಬರೆದಿದ್ದರು, ಈ ರಾಜ್ಯಗಳ ನಗರಗಳ ಮೇಲೆ ಉಗ್ರರ ದಾಳಿ ನಡೆಯುವ ಸಂಭಾವ್ಯತೆಯ ಬಗ್ಗೆ ದೂರವಾಣಿ ಕರೆ ಬಂದಿರುವ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ದಾಳಿಗಳು ರೈಲುಗಳಲ್ಲಿ ನಡೆಯಲಿವೆ ಹಾಗೂ 19 ಮಂದಿ ಉಗ್ರರು ತಮಿಳುನಾಡಿನ ರಾಮನಾಥಪುರಂನಲ್ಲಿದ್ದಾರೆಂದೂ ದೂರವಾಣಿ ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದನೆಂದು ಪತ್ರದಲ್ಲಿ ವಿವರಿಸಲಾಗಿತ್ತು.

ಇದಾದ ನಂತರ ಎಲ್ಲಾ ರಾಜ್ಯಗಳು ಅಲರ್ಟ್ ಘೋಷಿಸಿದ್ದವು. ಈತನ್ಮಧ್ಯೆ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ಸೇತುವೆಯನ್ನು ಸ್ಫೋಟಿಸಲಾಗುವುದು ಎಂದು ಅನಾಮಿಕ ಫೋನ್ ಕರೆ ಬಂದಿದೆ ಎಂದು ತಿಳಿಸಿದ ಪೊಲೀಸರು ಶುಕ್ರವಾರ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು. ಪಂಬನ್-ರಾಮೇಶ್ವರಂ ಸಂಪರ್ಕಿಸುವ ರಸ್ತೆ ಮತ್ತು ರೈಲ್ವೆ ಸೇತುವೆಗಳಲ್ಲ್ಲಿ ತೀವ್ರ ಕಾರ್ಯಾಚರಣೆ ನಡೆದಿತ್ತಲ್ಲದೆ ಶ್ವಾನದಳ, ಬಾಂಬ್ ನಿಷ್ಕ್ರಿಯ ಪಡೆಗಳೂ ಈ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದವು.

ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಸ್ಫೋಟಗಳ ನಂತರ ರಾಮೇಶ್ವರಂನಲ್ಲಿನ ರಾಮನಾಥಸ್ವಾಮಿ ದೇಗುಲದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಶ್ರೀಲಂಕಾ ಸ್ಫೋಟದಲ್ಲಿ ಭಾಗಿಯಾದವರು ಸಮುದ್ರ ಮೂಲಕ ಭಾರತ ಪ್ರವೇಶಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್, ಕರಾವಳಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಅಹೋರಾತ್ರಿ ಕಟ್ಟೆಚ್ಚರ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News