ಧರ್ಮದ ಆಧಾರದಲ್ಲಿ ಜನರ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ: ಚಿಂತಕ ಜಿ. ರಾಜಶೇಖರ್‌

Update: 2019-05-01 14:33 GMT

ಉಡುಪಿ: ಧರ್ಮದ ಆಧಾರದಲ್ಲಿ ತಲೆ ಲೆಕ್ಕಹಾಕಿದರೆ ಈ ದೇಶದಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಆದರೆ ಉದ್ಯೋಗಿಗಳು, ನಿರುದ್ಯೋಗಿಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡರೆ ದೇಶದಲ್ಲಿ ಅರೆ ನಿರುದ್ಯೋಗಿ, ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಇದೆ. ಮಾಂಸಹಾರಿ, ಸಸ್ಯಹಾರಿ ಆಧಾರದಲ್ಲಿ ತಲೆ ಲೆಕ್ಕ ಹಾಕಿದರೆ ಮಾಂಸಹಾರಿಗಳೇ ಬಹುಸಂಖ್ಯಾತರು. ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎನ್ನುವುದು ದ್ರವಿ ರೂಪದ ಕಲ್ಪನೆಯೇ ಹೊರತು, ಶಾಶ್ವತವೂ ಅಲ್ಲ, ಸ್ಥಿರವೂ ಅಲ್ಲ ಎಂದು ಚಿಂತಕ ಜಿ. ರಾಜಶೇಖರ್‌ ಹೇಳಿದರು.

ಮೇ ದಿನಾಚರಣೆಯ ಅಂಗವಾಗಿ ಸಿಐಟಿಯು ಉಡುಪಿ ತಾಲ್ಲೂಕು ಘಟಕದ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡುತ್ತೇವೆಂದು ಹಸಿ ಹಸಿ ಸುಳ್ಳುನ್ನು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಪಡೆದ ಯುವಕರಿಗೆ ಯಾವ ರೀತಿಯ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುವುದರಲ್ಲಿ ದೇಶದ ಭವಿಷ್ಯ ಅಡಗಿದೆ ಎಂದು ಅವರು ಹೇಳಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಂತೇಶ್‌ ಮಾತನಾಡಿ ದೇಶದಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ಕಳೆದ 45 ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆ ಏರಿಕೆಯ ಪರಿಣಾಮ ಸಾಮಾನ್ಯ ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ನೋಟು ಅಮಾನೀಕರಣ ಆದ ಬಳಿಕ ನಗರ ಪ್ರದೇಶದಲ್ಲಿ ಉದ್ಯೋಗ ಕಡಿಮೆ ಆಗಿದೆ. ಜನರು ನಗರದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ ಎಂದರು.

18 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಕಾರ್ಮಿಕ ಒತ್ತಾಯವಾಗಿದೆ. ಆದರೆ ಕನಿಷ್ಠ ವೇತನ ಇನ್ನು ನಿಗದಿಯಾಗಿಲ್ಲ. ಇತ್ತೀಚೆಗೆ ಕರ್ನಾಟಕ ಕನಿಷ್ಠ ವೇತನ ಮಂಡಳಿ ಕರ್ನಾಟಕ ರಾಜ್ಯದಲ್ಲಿ ವಿವಿಧ ಉದ್ಯಮಿಗಳಲ್ಲಿ ದುಡಿಯುವ 37 ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿತು. ಆದರೆ ಇದರ ವಿರುದ್ಧ ಮಾಲಕರು 1600 ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ಹೈಕೋರ್ಟ್‌ ನ್ಯಾಯಾಧೀಶರು ಕಾರ್ಮಿಕರ ಪರವಾಗಿ ಆದೇಶ ನೀಡಿದ್ದಾರೆ. ಶ್ರಮಿಕರ ನ್ಯಾಯಬದ್ಧವಾದ ಹಕ್ಕನ್ನು ಕಾಪಾಡುವುದು ಮಾಲಕರು ಹಾಗೂ ಸರ್ಕಾರದ ಕರ್ತವ್ಯ. ಹಾಗಾಗಿ ಕಾರ್ಮಿಕರನ್ನು ಹಗ್ಗವಾಗಿ ದುಡಿಸಿಕೊಳ್ಳಬಾರದು ಎಂಬುವುದನ್ನು ಹೇಳಿದ್ದಾರೆ ಎಂದರು.

ಪ್ರಧಾನಿ ಮೋದಿ ಕಳೆದ 5 ವರ್ಷದಲ್ಲಿ 119 ದಿನಗಳ ಕಾಲ ವಿದೇಶದಲ್ಲಿ ಸಂಚಾರ ಮಾಡಿದ್ದಾರೆ. ದೇಶದ ಸಂಸತ್ತಿಗೆ ಉತ್ತರದಾಹಿ ಆಗಬೇಕಿದ್ದ ಪ್ರಧಾನಿ, ಕೇವಲ 19 ದಿನಗಳು ಮಾತ್ರ ಸಂಸತ್ತಿಗೆ ಹಾಜರಾಗಿದ್ದಾರೆ. ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುವುದರ ಬಗ್ಗೆ ಅಸಮಾಧಾನವಿಲ್ಲ. ಆದರೆ, ಜಗತ್ತಿನ ಕಾರ್ಮಿಕ ವರ್ಗ ಹೇಗಿದೆ, ಅವರ ಬದುಕು ಹೇಗಿದೆ ಎಂಬುವುದನ್ನು ಅಧ್ಯಯನ ಮಾಡಿ ಇಲ್ಲಿ ಅಳವಡಿಸಿದರೆ ಸ್ವಾಗತಾರ್ಹ ಎಂದರು.

2018ರ ಡಿಸೆಂಬರ್‌ ತಿಂಗಳಲ್ಲಿ ಹೊರ ಬಿದ್ದ ಅಂಕಿ ಅಂಶದ ಪ್ರಕಾರ ದೇಶದ ಶೇ. 50ರಷ್ಟು ಆಸ್ತಿ ಕೇವಲ 8 ಮನೆತನಗಳಲ್ಲಿ ಕೇಂದ್ರೀಕೃತಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕದ ಬೇಡಿಕೆಗಳ ಕುರಿತು ಚರ್ಚೆಯೇ ನಡೆಯುತ್ತಿಲ್ಲ. ತಾವೇ ದುಡಿದು ಸಂಪಾದಿಸಿದ ದುಡ್ಡನ್ನು ಪಡೆಯಲು ಬ್ಯಾಂಕ್‌ನಲ್ಲಿ ಕ್ಯೂ ನಿಂತು 100 ಮಂದಿ ಮೃತಪಟ್ಟಿದ್ದಾರೆ. ಇದು ಮೋದಿ ಸರ್ಕಾರದ ಇತಿಹಾಸ ಎಂದು ಹೇಳಿದರು.

ಎನ್‌ಡಿಟಿವಿ ನಡೆಸಿದ ಸರ್ವೇಯ ಪ್ರಕಾರ ಲೋಕಸಭೆ ಚುನಾವಣೆ ಘೋಷಣೆ ಆದನಂತರ ಪ್ರಧಾನಿ ಮೋದಿ ಅವರು 35 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ನಿರುದ್ಯೋಗ, ಉದ್ಯೋಗ, ರೈತರ ಆತ್ಮಹತ್ಯೆ, ಕಪ್ಪುಹಣ, ಜಿಎಸ್‌ಟಿಯಿಂದ ಆಗಿರುವ ಸಮಸ್ಯೆ ಹಾಗೂ ನೋಟು ಬ್ಯಾನ್‌ನಿಂದ ಆಗಿರುವ ಅನಾಹುತ ಬಗ್ಗೆ ಯಾವುದೇ ಸಭೆಯಲ್ಲಿ ಮಾತನಾಡಿಲ್ಲ. 113 ಬಾರಿ ಪಾಕಿಸ್ತಾನ ಹೆಸರು ಹಾಗೂ 66 ಬಾರಿ ಬಾಲಕೋಟ್‌ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೇವಲ 6 ಬಾರಿ ಮಾತ್ರ ಉದ್ಯೋಗದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಟೀಕಿಸಿದರು.

ಸಿಐಟಿಯು ಉಡುಪಿ ತಾಲ್ಲೂಕು ಅಧ್ಯಕ್ಷ ರಾಮ ಕರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್‌, ಕೋಶಾಧಿಕಾರಿ ಉಮೇಶ್‌ ಕುಂದರ್‌, ಸಿಐಟಿಯು ಮುಖಂಡ ರಾದ ಬಾಲಕೃಷ್ಣ ಶೆಟ್ಟಿ, ಶಶಿಧರ್‌ ಗೊಲ್ಲ, ವಿಶ್ವನಾಥ, ಪ್ರಭಾಕರ, ದಯಾನಂದ, ಶೇಖರ್‌ ಬಂಗೇರ, ಗಣೇಶ್‌ ನಾಯ್ಕ್‌, ಸರೋಜ, ನಳಿನಿ, ವಾಮನ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News