ಬಂಟ್ವಾಳ: ಹೊಟೇಲ್‍ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಎಸೆಸೆಲ್ಸಿಯಲ್ಲಿ ಶಾಲೆಗೆ ಪ್ರಥಮ
ಬಂಟ್ವಾಳ, ಮೇ 2: ಶಾಲಾ ರಜಾ ದಿನದಲ್ಲಿ ಬಿ.ಸಿ.ರೋಡಿನ ಹೊಟೇಲ್‍ವೊಂದರಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 590 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ.
ಬಿಮೂಡ ಗ್ರಾಮದ ಕುಪ್ಪಿಲ ನಿವಾಸಿ ಪದ್ಮನಾಭ ಹಾಗೂ ಹೇಮಾವತಿ ದಂಪತಿ ಪುತ್ರ ಯತೀಶ್ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಿದ್ಯಾರ್ಥಿ ಯಾಗಿದ್ದು, ಕನ್ನಡ 95, ಇಂಗ್ಲಿಷ್ 93, ಹಿಂದಿ 90, ವಿಜ್ಞಾನ 94, ಗಣಿತ 97, ಸಮಾಜ 96 ಅಂಕ ಗಳಿಸುವ ಮೂಲಕ ಶಾಲೆಗೂ ಪ್ರಥಮ ಸ್ಥಾನಿಯಾಗಿದ್ದಾನೆ.
ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು, ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲಾ ರಜಾ ದಿನದಲ್ಲಿ ತನ್ನ ಸ್ವಯಂ ಇಚ್ಛೆಯಿಂದ ಬಿ.ಸಿ.ರೋಡಿನ ಹೊಟೇಲ್‍ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದಾನೆ. ಈ ಹಿಂದೆಯೂ ಶಾಲಾ ರಜಾ ದಿನಗಳಲ್ಲಿ ಕೆಟರಿಂಗ್ ಕೆಲಸಕ್ಕೆ ಹೋಗುತ್ತಿದ್ದೆ, ಯಾವುದೇ ಟ್ಯೂಷನ್ ಪಡೆಯದೆ ಶಿಕ್ಷಕರು ಹೇಳಿಕೊಟ್ಟದಷ್ಟನ್ನೆ ಕಲಿತು ಈ ಅಂಕ ಪಡೆದಿದ್ದೇನೆ ಎಂದು ಯತೀಶ್ ತಿಳಿಸಿದ್ದಾನೆ.
ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಯತೀಶ್ ಸಾಧನೆಯನ್ನು ಗುರುತಿಸಿ ಹೊಟೇಲ್ ಮಾಲಕ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ನಾರಾಯಣ ಪೆರ್ನೆ ಹೊಟೇಲ್‍ನಲ್ಲಿ ಅಭಿನಂದಿಸಿದರು.
ಈ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕ ಟಿ. ಶೇಷಪ್ಪ ಮೂಲ್ಯ, ಪುರಸಭಾ ಸದಸ್ಯ ಹರಿಪ್ರಸಾದ್, ಬಂಟ್ವಾಳ ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್ ಹಾಜರಿದ್ದರು.